ಸಾರಾಂಶ
ಬೆಂಗಳೂರು : ಪ್ರತಿಷ್ಠಿತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರದರ್ಶಕರ ವಲಯದಿಂದ ವೈಭವಿ ಚಿತ್ರಮಂದಿರದ ಮಾಲಕ ನರಸಿಂಹಲು ಎಂ. ಅವರು ಆಯ್ಕೆ ಆಗಿದ್ದಾರೆ.
2024-25ನೇ ಅವಧಿಗೆ ಶನಿವಾರ ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ವಜ್ರೇಶ್ವರಿ ಚಿತ್ರ ಮಂದಿರದ ಮಾಲಕ ಸುಂದರ್ ರಾಜು ಆರ್. ಅವರನ್ನು ಸೋಲಿಸುವ ಮೂಲಕ ನರಸಿಂಹಲು ಎಂ. ಅವರು ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನ ಪ್ರದರ್ಶಕರ ವಲಯಕ್ಕೆ ಮೀಸಲಾಗಿತ್ತು. ಈ ವಲಯದಿಂದ ಸ್ಪರ್ಧಿಸಿದ್ದ ನರಸಿಂಹಲು ಎಂ. ಹಾಗೂ ಸುಂದರ್ ರಾಜು ಆರ್. ಅವರ ನಡುವೆ ತೀವ್ರ ಪೈಪೋಟಿ ಇತ್ತು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರ ವಲಯದಿಂದ ಒಟ್ಟು 10 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ನಿರ್ಮಾಪಕ ವಲಯದಿಂದ ವೆಂಕಟೇಶ್ ಕೆ.ವಿ, ವಿತರಕ ವಲಯದಿಂದ ಶಿಲ್ಪಾ ಶ್ರೀನಿವಾಸ್ ಎಚ್.ಸಿ. ಹಾಗೂ ಪ್ರದರ್ಶಕರ ವಲಯದಿಂದ ರಂಗಪ್ಪ ಕೆ.ಓ. ಅವರು ಆಯ್ಕೆಯಾಗಿದ್ದಾರೆ.
ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಮೂರೂ ವಲಯಗಳಿಂದ ಒಟ್ಟು ಎಂಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ ವಿತರಕರ ವಲಯದಿಂದ ಎಂ.ಎನ್. ಕುಮಾರ್, ಪ್ರದರ್ಶಕರ ವಲಯದಿಂದ ಕುಶಾಲ್ ಎಲ್.ಸಿ ಹಾಗೂ ನಿರ್ಮಾಪಕರ ವಲಯದಿಂದ ರಾಮಕೃಷ್ಣ ಡಿ.ಕೆ ಅವರು ಚುನಾಯಿತರಾಗಿದ್ದಾರೆ. ಖಜಾಂಚಿ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದು, ಇವರಲ್ಲಿ ನಿರ್ಮಾಪಕ ಚಿಂಗಾರಿ ಮಹದೇವ್ ಗೆಲುವು ಸಾಧಿಸಿದ್ದಾರೆ.