ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ‘ಪಾತ್ರದಾರಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ಚಿತ್ರ ನಿರ್ದೇಶಕ ಸಂಗೀತ್‌ ಸಾಗರ್‌ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ

ಕನ್ನಡಪ್ರಭ ವಾರ್ತೆ ಕೊಪ್ಪ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ‘ಪಾತ್ರದಾರಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ಚಿತ್ರ ನಿರ್ದೇಶಕ ಸಂಗೀತ್‌ ಸಾಗರ್‌ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ

ಸಂಗೀತ ಸಾಗರ್ ಹಲವು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದರು. ಹರಿಹರಪುರದಲ್ಲಿ ಬುಧವಾರ ‘ಪಾತ್ರದಾರಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಎದೆನೋವಿನಿಂದ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿಯೇ ಅವರು ಕೊನೆಯುಸಿರೆಳೆದರು.

ಆದರೆ, ಆಸ್ಪತ್ರೆಯ ಬಿಲ್ ಎರಡೂವರೆ ಲಕ್ಷ ರೂ.ಕಟ್ಟಲಾಗದೆ ನಿರ್ದೇಶಕರ ಮೃತದೇಹ ಆಸ್ಪತ್ರೆಯಲ್ಲಿ ಉಳಿದಿತ್ತು. ‘ಸುವರ್ಣ ನ್ಯೂಸ್’ ಸುದ್ದಿವಾಹಿನಿಯಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕೆಲವರು ಧನಸಹಾಯ ಮಾಡಿದರು. ಈ ಮಧ್ಯೆ, ಆಸ್ಪತ್ರೆಯ ಆಡಳಿತ ಮಂಡಳಿ ಕೂಡ, ಬಿಲ್‌ನಲ್ಲಿ ಒಂದು ಲಕ್ಷ ಹಣ ಮಾಫಿ ಮಾಡಿ, ಬಾಕಿ ಉಳಿದ ಒಂದೂವರೆ ಲಕ್ಷ ರೂ. ಕಟ್ಟಲು ಹೇಳಿತ್ತು. ದಾನಿಗಳ ಸಹಾಯದಿಂದ ಹಣ ಹೊಂದಿಸಿ ಆಸ್ಪತ್ರೆ ಶುಲ್ಕವನ್ನು ಪಾವತಿಸಲಾಯಿತು. ಅಂತೂ, ಬುಧವಾರ ಸಂಜೆ 4ಕ್ಕೆ ಆಸ್ಪತ್ರೆಗೆ ದಾಖಲಾಗಿ, ಸಂಜೆ 6 ಗಂಟೆಗೆ ಮೃತಪಟ್ಟಿದ್ದ ನಿರ್ದೇಶಕರ ಮೃತದೇಹ 24 ಗಂಟೆಗಳ ಬಳಿಕ, ಗುರುವಾರ ಅಂತ್ಯಕ್ರಿಯೆ ಕಡೆ ಸಾಗಿತು.

ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ 30,000, ಸಿನಿಮಾ ಪ್ರೊಡ್ಯೂಸರ್ ಡೇವಿಡ್ ರೂ. 40,000, ವಿಜಯ್ ಸೂರ್ಯ 10,000, ರವಿ ಶೆಟ್ಟಿ 10,000, ಮತ್ತು ಕುಟುಂಬಸ್ಥರು 50,000 ಹೀಗೆ, 1,40,000 ಹಣ ಸಂಗ್ರಹಿಸಿ ಆಸ್ಪತ್ರೆ ಬಿಲ್ ಕಟ್ಟಲಾಯಿತು.