ಕರಾವಳಿಯ ಪ್ರತಿಭಾವಂತರ ಶ್ರಮ ಹಾಗೂ ಸೃಜನಶೀಲತೆಯಿಂದ ಮೂಡಿಬರುತ್ತಿರುವ ವಿಭಾ ಪ್ರೊಡಕ್ಷನ್ಸ್ ಸಂಸ್ಥೆಯ ಚೊಚ್ಚಲ ಕನ್ನಡ ಚಿತ್ರ ‘ಡಿ’ ಯ ಶೀರ್ಷಿಕೆ ಅನಾವರಣ ಸಮಾರಂಭ ಸೋಮವಾರ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ನೆರವೇರಿತು.
ಕಾರ್ಕಳ: ಕರಾವಳಿಯ ಪ್ರತಿಭಾವಂತರ ಶ್ರಮ ಹಾಗೂ ಸೃಜನಶೀಲತೆಯಿಂದ ಮೂಡಿಬರುತ್ತಿರುವ ವಿಭಾ ಪ್ರೊಡಕ್ಷನ್ಸ್ ಸಂಸ್ಥೆಯ ಚೊಚ್ಚಲ ಕನ್ನಡ ಚಿತ್ರ ‘ಡಿ’ ಯ ಶೀರ್ಷಿಕೆ ಅನಾವರಣ ಸಮಾರಂಭ ಸೋಮವಾರ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ನೆರವೇರಿತು.
ಕನ್ನಡ ಚಿತ್ರರಂಗದ ಭರವಸೆಯ ಯುವ ನಟ ನವೀನ್ ಶಂಕರ್ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು, ಹೊಸಬರ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದ್ದು, ಕರಾವಳಿಯಿಂದ ಹೊರಹೊಮ್ಮುತ್ತಿರುವ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಹೊಸ ಶಕ್ತಿ ನೀಡಲಿವೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಉದ್ಯಮಿ ವಾಸುದೇವ ಭಟ್ ಅವರು ಅತಿಥಿಯಾಗಿ ಭಾಗವಹಿಸಿ, ಸ್ಥಳೀಯ ಪ್ರತಿಭೆಗಳೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ ಸಂಸ್ಥಾಪಕ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದು, ಸ್ಥಳೀಯ ಕಲೆ ಮತ್ತು ಕಲಾವಿದರಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ಚಿತ್ರದ ಮೂಲಕ ಕಾರ್ಕಳದ ಯುವ ಪ್ರತಿಭೆ ವಿಶುಕುಮಾರ್ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪ್ರಕಾಶ್ ತುಮಿನಾಡು ಹಾಗೂ ‘ತರಂಗ’ ಧಾರಾವಾಹಿಯಿಂದ ಜನಪ್ರಿಯರಾದ ಯುವ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕರಾವಳಿ ಭಾಗದ ಹಲವಾರು ನುರಿತ ಕಲಾವಿದರು ಅಭಿನಯಿಸಲಿದ್ದಾರೆ.ಚಿತ್ರಕ್ಕೆ ಪ್ರವೀಣ್ ಜೆ.ಕೆ. ನಿರ್ದೇಶನ ನೀಡುತ್ತಿದ್ದು, ಹೇಮಂತ್ ಕುಮಾರ್ ಮತ್ತು ವಿಶುಕುಮಾರ್ ಕಥೆ ಬರೆದಿದ್ದಾರೆ. ‘ಡಿ’ ಒಂದು ಪರಿಪೂರ್ಣ ಹಾಸ್ಯಭರಿತ ಚಿತ್ರವಾಗಿದ್ದು, ಮನೋರಂಜನೆಯ ಜೊತೆಗೆ ಸಮಾಜಕ್ಕೆ ಹಾಗೂ ಯುವಜನತೆಗೆ ಒಳ್ಳೆಯ ಸಂದೇಶ ನೀಡುವ ಉದ್ದೇಶವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕಾರ್ಕಳ ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.