ಕನ್ನಡಪ್ರಭ ವಾರ್ತೆ ನಾಗಮಂಗಲ
ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳು, ಪರಿಹರಿಸುವ ಕುರಿತು ನಿರ್ಮಿಸಿರುವ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಕನ್ನಡ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಪಟ್ಟಣದ ಶ್ರೀವೆಂಕಟೇಶ್ವರ ಚಿತ್ರ ಮಂದಿರದಲ್ಲಿ ಶುಕ್ರವಾರ ಪ್ರೀಮಿಯರ್ ಶೋ ಆಯೋಜಿಸಲಾಗಿದೆ ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ತಿಳಿಸಿದರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ರಾಮಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಲನಚಿತ್ರದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಾಗಿ ಕುಮಾರ ಬಂಗಾರಪ್ಪ, ನಟಿ ರಾಗಿಣಿ, ದೊಡ್ಡಣ್ಣ, ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ ಎಂದರು.
ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆಗಳನ್ನು ಸರ್ಕಾರ ಮತ್ತು ಸಮಾಜದ ಗಮನಕ್ಕೆ ತರುವ ಉದ್ದೇಶದಿಂದ ಈ ಚಿತ್ರ ನಿರ್ಮಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚಲನಚಿತ್ರದ ಪ್ರಚಾರ ನಡೆಸುವ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ರಾಜ್ಯ ಸರ್ಕಾರದ ಹಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳಿಂದ ಉತ್ತಮ ಸಹಕಾರ ದೊರೆತಿದೆ ಎಂದರು.ಶುಕ್ರವಾರ ನಾಗಮಂಗಲದಲ್ಲಿ ಪ್ರೀಮಿಯರ್ ಪ್ರದರ್ಶನದ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳೊಂದಿಗೆ ಚಿತ್ರವನ್ನು ಜನರಿಗೆ ತಲುಪಿಸಲಾಗುವುದು. ಜು.31 ಶುಕ್ರವಾರ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಲನಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು.
ಈ ಚಿತ್ರದ ಯಶಸ್ಸಿನ ಬಳಿಕ ‘ಸರ್ಕಾರಿ ನ್ಯಾಯಬೆಲೆ ಅಂಗಡಿ ಭಾಗ-2’ರ ನಿರ್ಮಾಣಕ್ಕೂ ಸಿದ್ಧತೆ ನಡೆಯುತ್ತಿದೆ. ಕನ್ನಡದಲ್ಲೇ ಗುಣ ಮಟ್ಟದ ಚಿತ್ರ ನಿರ್ಮಿಸಿ ಬಳಿಕ ಅಗತ್ಯವಿದ್ದರೆ ಇತರೆ ಭಾಷೆಗಳಿಗೆ ಡಬ್ಬಿಂಗ್ ಮಾಡುವ ಉದ್ದೇಶವಿದೆ. ಕರ್ನಾಟಕದ ಇತಿಹಾಸ, ಸಂಸ್ಕೃತಿ ಹಾಗೂ ವೈಶಿಷ್ಟಗಳನ್ನು ದೇಶದಾದ್ಯಂತ ಪರಿಚಯಿಸುವಂತಹ ಚಿತ್ರಗಳನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಉತ್ತೇಜನ ನೀಡುವುದು ನಮ್ಮ ಸಂಕಲ್ಪವಾಗಿದೆ ಎಂದರು.
ಕುಟುಂಬ ಸಮೇತರಾಗಿ ಎಲ್ಲರೂ ನೋಡಬಹುದಾದ ಈ ಚಲನಚಿತ್ರದಲ್ಲಿ ಉತ್ತಮ ಸಂದೇಶವಿದೆ. ಹಾಗಾಗಿ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು, ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳು ಸೇರಿದಂತೆ ತಾಲೂಕಿನ ಎಲ್ಲ ಜನರು ತಮ್ಮ ಕುಟುಂಬ ಸಹಿತ ಚಿತ್ರಮಂದಿರಕ್ಕೆ ತೆರಳಿ ಈ ಚಲನಚಿತ್ರ ವೀಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಳಕಟ್ಟೆ ಶಿವರಾಮಯ್ಯ, ಹುರುಳಿಗಂಗನಹಳ್ಳಿ ಮಹದೇವ, ಶಿವಣ್ಣ, ಅರಸೇಗೌಡ ಇದ್ದರು.