ಅಂಕೋಲಾದ ಬಾವಿಕೇರಿ ನಿವಾಸಿ ಸುಭಾಸ್ ನಾಯಕ ಹುಬ್ಬಳ್ಳಿ ರಾಯಾಪುರದ ಚನ್ನಮ್ಮ ಅಟೋಮೋಟಿವಸ್‌ನ ಅಶೋಕ ಲೈಲ್ಯಾಂಡನ 19 1 ಸೀಟಿನ ವಾಹನ ಖರೀದಿಸಲು ಬಯಸಿದ್ದರು. ಆದರೆ, 19 1 ಸೀಟಿನ ಬದಲಾಗಿ 28 1 ಸೀಟಿನ ವಾಹನ ವಿತರಿಸಿದ್ದು, ಆರ್‌ಟಿಒ ನೋಂದಣಿಯಲ್ಲಿ ಗೊತ್ತಾಗಿದೆ.
ಧಾರವಾಡ:
ಗ್ರಾಹಕನಿಗೆ ಅನ್ಯ ವಾಹನ ವಿತರಿಸಿದ ಅಶೋಕ ಲೈಲ್ಯಾಂಡ್ ಕಂಪನಿಗೆ ದಂಡ ಮತ್ತು ಪರಿಹಾರ ನೀಡಲು ಇಲ್ಲಿಯ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.ಅಂಕೋಲಾದ ಬಾವಿಕೇರಿ ನಿವಾಸಿ ಸುಭಾಸ್ ನಾಯಕ ಹುಬ್ಬಳ್ಳಿ ರಾಯಾಪುರದ ಚನ್ನಮ್ಮ ಅಟೋಮೋಟಿವಸ್‌ನ ಅಶೋಕ ಲೈಲ್ಯಾಂಡನ 19+1 ಸೀಟಿನ ವಾಹನ ಖರೀದಿಸಲು ಬಯಸಿದ್ದರು. ವಾಹನದ ಒಟ್ಟು ಖರ್ಚು ₹ 25,76,730 ಭರಿಸಲು ಒಪ್ಪಿ ಅಂಕೋಲಾ ಅರ್ಬನ್ ಬ್ಯಾಂಕಿನಿಂದ ವಾಹನ ಖರೀದಿಗಾಗಿ ₹ 25 ಲಕ್ಷ ಸಾಲ ಸಹ ಪಡೆದು ಚನ್ನಮ್ಮ ಅಟೋಮೋಟಿವಸ್‌ಗೆ ವರ್ಗಾಯಿಸಿದ್ದರು. ಆದರೆ, ತಾನು ಹೇಳಿದ 19+1 ಸೀಟಿನ ಬದಲಾಗಿ 28+1 ಸೀಟಿನ ವಾಹನ ವಿತರಿಸಿದ್ದು, ಆರ್‌ಟಿಒ ನೋಂದಣಿಯಲ್ಲಿ ಗೊತ್ತಾಗಿದೆ.
ಈ ತಪ್ಪು ಸರಿಪಡಿಸಿಕೊಡಲು ನಡೆಸಿದ ಪ್ರಯತ್ನ ವಿಫಲವಾಗಿ ಕೊನೆಗೆ ಸುಭಾಸ ನಾಯಕ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ತಪ್ಪಾಗಿರುವುದನ್ನು ಸರಿಪಡಿಸಿಕೊಡಲು ದೂರುದಾರರು ಮನವಿ ಮಾಡಿದರೂ ಅಲ್ಲಗಳೆದಿರುವುದು ಆಯೋಗದ ಗಮನಕ್ಕೆ ಬಂದು ಆದೇಶವಾದ ಒಂದು ತಿಂಗಳ ಒಳಗಾಗಿ 19+1 ಸೀಟಿನ ವಾಹನ ಕೊಡಬೇಕು. ತಪ್ಪಿದ್ದಲ್ಲಿ ವಾಹನದ ಮೊತ್ತವನ್ನು ಶೇ.8ರಂತೆ ಬಡ್ಡಿ ಲೆಕ್ಕ ಹಾಕಿ ಕೊಡಲು ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗೆ ₹ 50 ಸಾವಿರ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ₹ 10,000 ಕೊಡುವಂತೆ ಆಯೋಗ ರಾಯಾಪುರದ ಚನ್ನಮ್ಮ ಅಟೋಮೋಟಿವಸ್‌ಗೆ ನಿರ್ದೇಶಿಸಿದೆ.