ಗಣಪತಿ ವಿಗ್ರಹಗಳಿಗೆ ಅಂತಿಮ ಸ್ಪರ್ಶ

| Published : Aug 25 2025, 01:00 AM IST

ಸಾರಾಂಶ

ಗೌರಿಗಣೇಶನನ್ನು ಸಂಭ್ರಮದಿಂದ ಪ್ರತಿಷ್ಠಾಪಿಸಲು ಎಲ್ಲೆಡೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಗೌರಿಗಣೇಶ ಹಬ್ಬ ಸನಿಹದಲ್ಲಿರುವ ಕಾರಣ, ಗೌರಿ ಗಣೇಶನ ಮೂರ್ತಿಗಳಿಗೆ ವಿಗ್ರಹ ತಯಾರಕರು ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದಾರೆ.

ಪರಿಸರ ಸ್ನೇಹಿ ಮಣ್ಣಿನ ಗಣಪನಿಗೆ ಹೆಚ್ಚಿದ ಬೇಡಿಕೆ

ವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ಗೌರಿಗಣೇಶನನ್ನು ಸಂಭ್ರಮದಿಂದ ಪ್ರತಿಷ್ಠಾಪಿಸಲು ಎಲ್ಲೆಡೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಗೌರಿಗಣೇಶ ಹಬ್ಬ ಸನಿಹದಲ್ಲಿರುವ ಕಾರಣ, ಗೌರಿ ಗಣೇಶನ ಮೂರ್ತಿಗಳಿಗೆ ವಿಗ್ರಹ ತಯಾರಕರು ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದಾರೆ.

ಸಂಡೂರಿನಲ್ಲಿ ನಾಲ್ಕೈದು ಕುಟುಂಬಗಳು ವಂಶಪಾರಂಪರ್ಯವಾಗಿ ಗಣೇಶನ ವಿಗ್ರಹ ತಯಾರಿಸಿ ಮಾರಾಟ ಮಾಡುತ್ತಾರೆ. ಕೆಲವರು ಇತರೆಡೆಗಳಿಂದ ಗಣೇಶನ ವಿಗ್ರಹ ತಂದು ಮಾರಾಟ ಮಾಡುತ್ತಾರೆ.

ಮಣ್ಣಿನ ಗಣಪನಿಗೆ ಬೇಡಿಕೆ:

ಇತ್ತೀಚಿನ ವರ್ಷಗಳಲ್ಲಿ ಪರಿಸರಸ್ನೇಹಿ ಮೂರ್ತಿ ಪ್ರತಿಷ್ಠಾಪನೆ ಕುರಿತಂತೆ ಜಾಗೃತಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ಪರಿಸರಸ್ನೇಹಿಯಾದ ಮಣ್ಣಿನ ಗಣಪನಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹಲವರು ಪರಿಸರಕ್ಕೆ ಪೂರಕವಾದ ಬಣ್ಣಗಳನ್ನು ಬಳಸಲು ಆರಂಭಿಸಿದ್ದಾರೆ. ಕೆಲವರು ಬಣ್ಣದ ಲೇಪನವಿಲ್ಲದ ಮಣ್ಣಿನ ಗಣಪನ ಮೂರ್ತಿಯನ್ನು ಖರೀದಿಸಿ, ಪೂಜಿಸಲು ಮುಂದಾಗುತ್ತಿರುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.

ಸಂಡೂರಿನ ಮೇನ್‌ಬಜಾರಿನಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುವ ಆರ್. ಸುಂದರ್‌ಕೃಷ್ಣ (ಕೃಷ್ಣ) ಗಣೇಶನ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಸಿದ್ಧಪಡಿಸಲಾದ ಗಣೇಶನ ವಿಗ್ರಹಗಳ ಕುರಿತು ''''''''ಕನ್ನಡಪ್ರಭ''''''''ದೊಂದಿಗೆ ಮಾತನಾಡಿ, ನಮ್ಮ ಮನೆಯಲ್ಲಿ ವಂಶಪಾರಂಪರ್ಯವಾಗಿ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ನಾನು ನಮ್ಮ ತಂದೆ-ತಾಯಿಯಿಂದ ವಿಗ್ರಹ ತಯಾರಿಸುವುದನ್ನು ಕಲಿತಿದ್ದೇನೆ. ಈಗ ನಮ್ಮ ಕುಟುಂಬದ ಎಲ್ಲರೂ ವಿಗ್ರಹ ತಯಾರಿಕೆಯಲ್ಲಿ ಸಹಕರಿಸುತ್ತಾರೆ. ಹಬ್ಬ ೭-೮ ತಿಂಗಳು ಇರುವಾಗಲೇ ನಾವು ಹುಬ್ಬಳ್ಳಿ ಮುಂತಾದೆಡೆಯಿಂದ ಮಣ್ಣನ್ನು ತಂದು ಹದಮಾಡಿ, ವಿಗ್ರಹಗಳನ್ನು ತಯಾರಿಸುತ್ತೇವೆ. ನಾವು ಕೇವಲ ಮಣ್ಣಿನ ಗಣೇಶನ ಮೂರ್ತಿಗಳನ್ನು ತಯಾರಿಸಿದ್ದೇವೆ. ಕೆಲವರು ಬಣ್ಣ ಹಾಕಿದ ಗಣಪನನ್ನು ಕೇಳಿದರೆ, ಕೆಲವರು ಬಣ್ಣ ಹಾಕದ ಗಣಪನ ಮೂರ್ತಿಯನ್ನು ಕೇಳುತ್ತಾರೆ. ಅವರ ಬೇಡಿಕೆಗಳಿಗೆ ತಕ್ಕಂತೆ ಎರಡೂ ರೀತಿಯ ಗಣೇಶನ ಮೂರ್ತಿಗಳನ್ನು ತಯಾರಿಸಿದ್ದೇವೆ.

ನಮ್ಮಲ್ಲಿ ೬ ಇಂಚಿನಿಂದ ೭ ಅಡಿಯ ವರೆಗೆ ಹಾಗೂ ₹೮೦ರಿಂದ ₹೧೮೦೦೦ದ ವರೆಗಿನ ಗಣೇಶನ ಮೂರ್ತಿಗಳು ದೊರೆಯುತ್ತವೆ. ಈಗಾಗಲೇ ಸುಮಾರು ೮೦೦ ಗಣೇಶನ ಮೂರ್ತಿ ತಯಾರಿಸಿದ್ದೇವೆ. ಹಲವರು ಅಡ್ವಾನ್ಸ್ ಆಗಿ ತಮಗಿಷ್ಟವಾದ ಮೂರ್ತಿಗಳನ್ನು ಬುಕ್ ಮಾಡಿ ಹೋಗಿದ್ದಾರೆ. ಕೆಲವರು ಬಂದು ವಿಗ್ರಹಗಳನ್ನು ವೀಕ್ಷಿಸಿ, ದರವನ್ನು ಕೇಳಿಕೊಂಡು ಹೋಗುತ್ತಿದ್ದಾರೆ. ಗ್ರಾಹಕರು ಎರಡು ತಿಂಗಳು ಮುಂಚಿತವಾಗಿ ತಿಳಿಸಿದರೆ, ಅವರು ತಿಳಿಸಿದ ಮಾದರಿಯಲ್ಲಿ ಗಣೇಶನ ಮೂರ್ತಿಗಳನ್ನು ತಯಾರಿಸಿ ಕೊಡುತ್ತೇವೆ ಎಂದರು.

ಪರಿಸರ ಸಂರಕ್ಷಣೆಯ ಹಿನ್ನೆಲೆ ಬಣ್ಣ ರಹಿತವಾದ ಮಣ್ಣಿನ ಗಣಪನ ಪ್ರತಿಷ್ಠಾಪನೆ ಕುರಿತಂತೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ಹಲವು ಸಂಘ-ಸಂಸ್ಥೆಗಳು ಮಣ್ಣಿನ ಗಣೇಶನ ಪ್ರತಿಷ್ಠಾಪನೆ ಮಾಡಲು ಮುಂದೆ ಬರುತ್ತಿವೆ. ಪಿಒಪಿ ಗಣೇಶನ ಮೂರ್ತಿಗಳು ಮಾರಾಟವಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲ್ದಳ್ಳಿ ಆಗ್ರಹಿಸಿದ್ದಾರೆ.