ಕೊನೆಗೂ ಬಿಡಾಡಿ ದನಗಳಿಗೆ ದಂಡ ವಿಧಿಸಿದ ಗುಂಡ್ಲುಪೇಟೆ ಪುರಸಭೆ

| Published : Jul 11 2024, 01:33 AM IST

ಸಾರಾಂಶ

ಕನ್ನಡಪ್ರಭ ಪತ್ರಿಕೆ ವರದಿ ಬಳಿಕ ಕೊನೆಗೂ ಎಚ್ಚೆತ್ತ ಪುರಸಭೆ ಹಾಗೂ ಪೊಲೀಸರು ಗುಂಡ್ಲುಪೇಟೆ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿ ಜಾನುವಾರು ಮಾಲೀಕರಿಗೆ ದಂಡ ವಿಧಿಸಿ, ಮುಚ್ಚಳಿಕೆ ಬರೆದು ಬಿಟ್ಟಿದ್ದಾರೆ.

ಗುಂಡ್ಲುಪೇಟೆ: ಕನ್ನಡಪ್ರಭ ಪತ್ರಿಕೆ ವರದಿ ಬಳಿಕ ಕೊನೆಗೂ ಎಚ್ಚೆತ್ತ ಪುರಸಭೆ ಹಾಗೂ ಪೊಲೀಸರು ಪಟ್ಟಣದ ಕಾರ್ಯಾಚರಣೆ ನಡೆಸಿ ಜಾನುವಾರು ಮಾಲೀಕರಿಗೆ ದಂಡ ವಿಧಿಸಿ, ಮುಚ್ಚಳಿಕೆ ಬರೆದು ಬಿಟ್ಟಿದ್ದಾರೆ.

ಕಳೆದ ಜೂ.17 ರ ಕನ್ನಡಪ್ರಭ ಪತ್ರಿಕೆಯಲ್ಲಿ ಗುಂಡ್ಲುಪೇಟೇಲಿ ಬಿಡಾಡಿ ದನ, ಕರುಗಳ ಹಾವಳಿ, ವಾಹನ ಸವಾರರು, ಪಾದಚಾರಿಗಳಿಗೆ ಕಂಟಕ, ದನ, ಕರುಗಳನ್ನು ಹಿಡಿದು ಪಿಂಜರಾ ಪೋಲ್‌ಗೆ ಹಾಕಲಿ ಎಂದು ವರದಿ ಪ್ರಕಟಿಸಿ ಎಚ್ಚರಿಸಿತ್ತು. ಬುಧವಾರ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ಸಾಹೇಬ ಗೌಡ, ಆರೋಗ್ಯ ನಿರೀಕ್ಷಕ ಗೋಪಿ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಪಟ್ಟಣದ ವ್ಯಾಪ್ತಿಯಲ್ಲಿ ತಿರುಗಾಡುತ್ತಿದ್ದ ಬಿಡಾಡಿ ದನ, ಕರುಗಳನ್ನು ಹಿಡಿದರು. ಬಳಿಕ ದನ, ಕರುಗಳ ಮಾಲೀಕರಿಗೆ ದಂಡ ವಿಧಿಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಮುಂದೆ ಬಿಡದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಬಿಡಾಡಿ ದನ, ಕರುಗಳನ್ನು ಬಿಡದಂತೆ ಪಟ್ಟಣದಲ್ಲಿ ಡಂಗೂರ ಹಾಕಲಾಗಿತ್ತು. ಬುಧವಾರ ಕಾರ್ಯಾಚರಣೆ ನಡೆಸಲಾಗಿದೆ. ಪಟ್ಟಣದಲ್ಲಿ ಸಿಕ್ಕ ದನ, ಕರುಗಳಿಗೆ ಮೊದಲಿಗೆ ದಂಡ ಹಾಕಿ ಮುಚ್ಚಳಿಕೆ ಬರೆಸಿಕೊಂಡು ಬಿಡಲಾಗಿದೆ.-ಕೆ.ಪಿ.ವಸಂತಕುಮಾರಿ,ಪುರಸಭೆ ಮುಖ್ಯಾಧಿಕಾರಿ.