ಸಾರಾಂಶ
ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ಮಿತಿಮೀರಿದ್ದು, ಕೇವಲ ಒಂದು ತಿಂಗಳ ಲೋನ್ ಕಂತು ಪಾವತಿಸದ ಕಾರಣಕ್ಕೆ ರೈತನೊಬ್ಬನ ಜಾನುವಾರುಗಳನ್ನು ಬಲವಂತವಾಗಿ ಎಳೆದೊಯ್ದಿರುವ ಘಟನೆ ಶಿವಮೊಗ್ಗದ ಸಿದ್ಲಿಪುರದಲ್ಲಿ ನಡೆದಿದೆ.ಸಿದ್ಲಿಪುರ ಗ್ರಾಮದ ರೈತ ಭರತ್ ಎಂಬುವವರು ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ 2 ಲಕ್ಷ ರು. ಲೋನ್ ಪಡೆದಿದ್ದರು. ಅದರಂತೆ, ಅವರು ಪ್ರತಿ ತಿಂಗಳು 9,300 ಕಂತು ಪಾವತಿಸುತ್ತಿದ್ದರು. ಆದರೆ, ಇತ್ತೀಚೆಗೆ ಹಾಲು ಕೊಡುತ್ತಿದ್ದ ಒಂದು ಹಸು ಅಕಾಲಿಕವಾಗಿ ಸಾವನ್ನಪ್ಪಿದ ಕಾರಣ ರೈತ ಭರತ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಒಂದು ತಿಂಗಳ ಲೋನ್ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಲೋನ್ ಕಂತು ಬಾಕಿ ಉಳಿದಿದ್ದನ್ನು ಗಮನಿಸಿದ ಫೈನಾನ್ಸ್ ಸಿಬ್ಬಂದಿ, ಏಕಾಏಕಿ ರೈತನ ಮನೆಗೆ ಆಗಮಿಸಿ, ಒಂದು ಹೋರಿ ಮತ್ತು ಎರಡು ಹಸುಗಳನ್ನು ಬಲವಂತವಾಗಿ ಗೂಡ್ಸ್ ವಾಹನದಲ್ಲಿ ತುಂಬಿಸಿ ಎಳೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.ಫೈನಾನ್ಸ್ ಸಿಬ್ಬಂದಿಯ ವರ್ತನೆಯಿಂದ ಆಕ್ರೋಶಗೊಂಡ ರೈತ ಸಂಘಟನೆಗಳು, ಶಿವಮೊಗ್ಗದ ಸವಾರ್‌ಲೈನ್ ರಸ್ತೆಯಲ್ಲಿರುವ ಖಾಸಗಿ ಫೈನಾನ್ಸ್ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಜಾನುವಾರುಗಳನ್ನು ವಶಪಡಿಸಿಕೊಂಡಿರುವುದು ಸರಿಯಲ್ಲ. ರೈತನ ಕ್ಷಮೆ ಕೇಳಬೇಕು. ಕೂಡಲೇ ಜಾನುವಾರುಗಳನ್ನು ಮರಳಿ ರೈತನ ಮನೆಗೆ ಬಿಟ್ಟು ಬರಬೇಕು ಎಂದು ಆಗ್ರಹಿಸಿದರು.
;Resize=(128,128))
;Resize=(128,128))