ದಿನನಿತ್ಯ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಕಾಂಗ್ರೆಸ್ಸಿಗರನ್ನು ಕೇಳಿದರೆ ಹೈಕಮಾಂಡ್ ಎನ್ನುತ್ತಾರೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರೇ ಹೈಕಮಾಂಡ್ ತೀರ್ಮಾನಿಸುತ್ತೆ ಎನ್ನುತ್ತಾರೆ. ಹಾಗಾದರೆ ನಿಮ್ಮ ಪಕ್ಷದಲ್ಲಿ ಹೈಕಮಾಂಡ್ ಎಂದರೆ ಯಾರು, ಅವರನ್ನು ಕೇವಲ ಕುರ್ಚಿಗಾಗಿ ಕೂರಿಸಿ ನಿಮ್ಮನ್ನು ಶಕ್ತಿ ಹೀನ ಅಧ್ಯಕ್ಷರನ್ನಾಗಿ ಮಾಡಿದ್ದಾರೆಯೇ.

ಕನ್ನಡಪ್ರಭ ವಾರ್ತೆ ಮದ್ದೂರು

ಸಂಪದ್ಭರಿತ ಕರ್ನಾಟಕ ರಾಜ್ಯದಿಂದ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಆರ್ಥಿಕ ವ್ಯವಸ್ಥೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಕೇವಲ ಮೂರೇ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಹಿಮಾಚಲ ಪ್ರದೇಶವನ್ನು ಕರ್ನಾಟಕ್ಕೆ ಹೋಲಿಕೆ ಮಾಡಲಾಗದು. ಕರ್ನಾಟಕ ಸಂಪದ್ಭರಿತವಾದ ರಾಜ್ಯ. ಕಾಂಗ್ರೆಸ್ ಉಸಿರಾಡುತ್ತಿರುವುದೇ ನಮ್ಮ ರಾಜ್ಯದಿಂದ ಆರ್ಥಿಕತೆಯಿಂದ ಎಂದು ಟೀಕಿಸಿದರು.

ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಆ ಪಕ್ಷದ ಕೇಂದ್ರ ನಾಯಕರು ಮಾತನಾಡುತ್ತೇವೆ ಎನ್ನುತ್ತಾರೆ. ಬದಲಾವಣೆ ಮಾಡಿದರೆ ಸರ್ಕಾರಕ್ಕೆ ತೊಂದರೆಯಾದರೆ ಎಲ್ಲಿ ನಮ್ಮ ಬುಡಕ್ಕೇ ಬರುತ್ತೆದೆ ಎಂಬ ಕಾರಣಕ್ಕೆ ಸುಮ್ಮನಿದ್ದಾರೆ ಎಂದು ಛೇಡಿಸಿದರು.

ದಿನನಿತ್ಯ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಕಾಂಗ್ರೆಸ್ಸಿಗರನ್ನು ಕೇಳಿದರೆ ಹೈಕಮಾಂಡ್ ಎನ್ನುತ್ತಾರೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರೇ ಹೈಕಮಾಂಡ್ ತೀರ್ಮಾನಿಸುತ್ತೆ ಎನ್ನುತ್ತಾರೆ. ಹಾಗಾದರೆ ನಿಮ್ಮ ಪಕ್ಷದಲ್ಲಿ ಹೈಕಮಾಂಡ್ ಎಂದರೆ ಯಾರು, ಅವರನ್ನು ಕೇವಲ ಕುರ್ಚಿಗಾಗಿ ಕೂರಿಸಿ ನಿಮ್ಮನ್ನು ಶಕ್ತಿ ಹೀನ ಅಧ್ಯಕ್ಷರನ್ನಾಗಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ನಾನು ಇನ್ನೂ ಶಕ್ತಿಯುತವಾಗಿದ್ದೇನೆ. ರಾಜಕೀಯವಾಗಿ ಕುಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪದೇ ಪದೇ ಹೇಳುತ್ತಾರೆ. ಇದರ ಒಳಗುಟ್ಟೇನು?, ಸಿಎಂ ಕುರ್ಚಿ ಗಟ್ಟಿಯಾಗಿದೆಯಾ ಎಂದು ನಾವು ಪ್ರಶ್ನೆ ಮಾಡುವುದಕ್ಕಿಂತ ಹೆಚ್ಚಾಗಿ ಅವರ ಸರ್ಕಾರದ ಮಂತ್ರಿಗಳು, ಶಾಸಕರು ಅಷ್ಟೇ ಏಕೆ ಮುಖ್ಯಮಂತ್ರಿಗಳೇ ಸದನದ ಒಳಗೆ ನಿಂತು ಚರ್ಚೆ ಮಾಡುತ್ತಿದ್ದಾರೆ. ಇದರಲ್ಲೇ ಅರ್ಥ ಅಡಗಿದೆ ಎಂದರು.

ರಾಮನಗರದಿಂದಲೇ ಅಸ್ತಿತ್ವ ಪಡೆಯುತ್ತೇನೆ:

ನಾನು ಸ್ವಾಭಿಮಾನಿ. ಯಾರ ಮೈಮೇಲೆ ಬಿದ್ದು ಯಾರ ಮೇಲೂ ನಿಲ್ಲುವಂತಹ ಪ್ರಶ್ನೆ ಇಲ್ಲ. ರಾಮನಗರ ದೇವೇಗೌಡರಿಗೆ ಮರುಜೀವ ಕೊಟ್ಟ ಜಿಲ್ಲೆ. ಹಾಗಾಗಿ ನಾನು ಫಲಾಯನ ಮಾಡಿ ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ನನ್ನನ್ನು ನಂಬಿದ ಕಾರ್ಯಕರ್ತರು, ನಾಯಕರು, ಮುಖಂಡರಿದ್ದಾರೆ. ಇಲ್ಲೇ ಸೇವೆ ಮಾಡುತ್ತಿದ್ದೇನೆ. ಇದರಲ್ಲಿ ಸ್ವಲ್ಪ ಏರು ಪೇರಾಗಿರಬಹುದು. ಅಲ್ಲೇ ನನ್ನ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಿಖಿಲ್ ಕುಮಾರಸ್ವಾಮಿ ಸೋಲಿಸಲು 2019ರ ಮಂಡ್ಯ ಲೋಕಸಭಾ ಚುನಾವಣೆಯಿಂದ, 23ನೇ ವಿಧಾನ ಸಭಾ ಚುನಾವಣೆ ಅಷ್ಟೇ ಏಕೆ ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಸಂಪೂರ್ಣ ಸಚಿವ ಸಂಪುಟದ ಕಾಣದ ಕೈಗಳು ವಿಧಾನಸಭೆಗೆ ಪ್ರವೇಶ ಮಾಡದಂತೆ ತಡೆಯಲು ಬಹಳ ಜನ ಶಪತ ತೆಗೆದುಕೊಂಡಿದ್ದರು ಎಂದರು.

ನನ್ನ ರಾಜಕೀಯ ಅಣೆಬರಹವನ್ನು ತಾಯಿ ಚಾಮುಂಡೇಶ್ವರಿ, ಜನ ನಿರ್ಧಾರ ಮಾಡುತ್ತಾರೆ. ರಾಜ್ಯದ ಪರ ಚಿಂತನೆ ಮಾಡುವ ಯುವ ಸಮುದಾಯದ ಯುವಕನಾಗಿ ಬಂದಿದ್ದೇನೆ. ಉಳಿಸಿಕೊಳ್ಳುವುದು, ಬಿಡುವುದು ಜನರಿಗೆ ಬಿಟ್ಟ ವಿಚಾರ ಎಂದರು.

ಮೈತ್ರಿ ಚರ್ಚೆ ಮಾಡಿಲ್ಲ:

ಮೇಲ್ಮಟ್ಟದಲ್ಲಿ ನಾಯಕರನ್ನು ಸೃಷ್ಟಿ ಮಾಡಲು ಕಾರ್ಯಕರ್ತರು ದುಡಿಯುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ನಾಯಕರು ಕಾರ್ಯಕರ್ತರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಕೊಡಿಸಲು ಕೆಲಸ ಮಾಡುತ್ತಾರೆ. ಎಲ್ಲ ಪಕ್ಷಗಳಲ್ಲೂ ಕಾರ್ಯಕರ್ತರು ಹೆಚ್ಚಿರುತ್ತಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ಸಭೆ ಮಾಡುತ್ತಿದ್ದೇವೆ. ಚರ್ಚೆಗಳೂ ನಡೆಯುತ್ತಿವೆ. ಮೈತ್ರಿ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಮುಖಂಡರಾದ ಬಿಳಿಯಪ್ಪ, ಕೆಸ್ತೂರು ರಾಜಣ್ಣ, ಶಂಕರ, ಬ್ಯಾಡರಹಳ್ಳಿ ರಾಮಕೃಷ್ಣ, ಪ್ರವೀಣ್, ಚಾಮನಹಳ್ಳಿ ರಾಕಿ, ವಿನಯ್, ರವಿ ಚನ್ನಸಂದ್ರ ಮತ್ತಿತರರಿದ್ದರು.