ಸಾರಾಂಶ
ಹಲಗೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ಮತ್ತು ಶಾಲೆ ತೊರೆದಿರುವ ಮಕ್ಕಳನ್ನು ಗುರುತಿಸುವುದು. ಅಗತ್ಯವಿರುವ ಬಡ ಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಆರ್ಥಿಕ ಸಹಕಾರ ನೀಡುವುದು ನಮ್ಮ ಎಜಿಎಸ್ಎಸ್ ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಸಂವಿಧಾನದ ಆಶಯಗಳು ಮತ್ತು ಮಹತ್ವವನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಅರಿತುಕೊಂಡರೆ ಮಾತ್ರ ಸದೃಢ ಹಾಗೂ ಪ್ರಬುದ್ಧ ಭಾರತ ನಿರ್ಮಾಣ ಆಗಲು ಸಾಧ್ಯ ಎಂದು ವಿಚಾರವಾದಿ ಕೆ.ಎಸ್.ಮಹೇಶ್ ಅಭಿಪ್ರಾಯಪಟ್ಟರು.ಬ್ಯಾಡರಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಗ್ಯ ಕೆಂಪಯ್ಯ ಮಾತನಾಡಿ, ಹಲಗೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ಮತ್ತು ಶಾಲೆ ತೊರೆದಿರುವ ಮಕ್ಕಳನ್ನು ಗುರುತಿಸುವುದು. ಅಗತ್ಯವಿರುವ ಬಡ ಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಆರ್ಥಿಕ ಸಹಕಾರ ನೀಡುವುದು ನಮ್ಮ ಎಜಿಎಸ್ಎಸ್ ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.ಪ್ರಾಂಶುಪಾಲ ಅನಿಲ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುತ್ತಿರುವ ಎಜಿಎಸ್ಎಸ್ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಬರೆದಿರುವ ‘ಸಂವಿಧಾನ ಓದು’ ಪುಸ್ತಕವನ್ನು ವಿತರಣೆ ಮಾಡಲಾಯಿತು. ಬೆಳಕು ಪರಿವರ್ತನಾ ಕಲಾ ತಂಡದ ವೆಂಕಟಾಚಲ ಅವರಿಂದ ಸಂವಿಧಾನ ಜಾಗೃತಿ ಗೀತ ಗಾಯನ ಕಾರ್ಯಕ್ರಮ ನಡೆಯಿತು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ನಿವೃತ್ತ ಜಂಟಿ ನಿಬಂಧಕರಾದ ಡಿ.ಬಿ.ಲಿಂಗಣ್ಣಯ್ಯ, ಪ್ರಾಂಶುಪಾಲ ಅನಿಲ್ ಕುಮಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎಜಿಎಸ್ಎಸ್ ಸಂಘದ ಅಧ್ಯಕ್ಷ ಶಿವಣ್ಣ, ಗೌರವಾಧ್ಯಕ್ಷ ನಾಗಯ್ಯ, ಕಾರ್ಯದರ್ಶಿ ಕೆ.ಜಿ.ಸಿದ್ದಲಿಂಗಮೂರ್ತಿ, ಸಹ ಕಾರ್ಯದರ್ಶಿ ಎಸ್.ಉಮೇಶ್, ಸಂಚಾಲಕ ಜಯಶಂಕರ್, ಶಾಲೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.