ಸಾರಾಂಶ
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ । ಪುಷ್ಪಗಿರಿಯಲ್ಲಿ ಹಾವೇರಿ ಜಿಲ್ಲೆಯ ಸ್ವಸಹಾಯ ಸಂಘಗಳ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಹಳೇಬೀಡುಆರ್ಥಿಕ ಶಿಸ್ತು, ಪಾರದರ್ಶಕ ವ್ಯವಹಾರ, ನಿಯಮಗಳ ಪಾಲನೆ, ನಂಬಿಕೆ ವಿಶ್ವಾಸ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯಶಸ್ಸಿನ ಗುಟ್ಟು. ಆರ್ಥಿಕ ಜಾಗೃತಿಯು ಎಲ್ಲರ ಹೊಣೆಯಾಗಿದೆ ಎಂದು ಶ್ರೀ ಕ್ಷೇತ್ರ ಪುಷ್ಪಗಿರಿಯ ಜಗದ್ಗುರು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹಳೇಬೀಡಿನ ಸಮೀಪ ಪುಷ್ಪಗಿರಿ ಮಠದಲ್ಲಿ ಸೋಮವಾರ ಹಾವೇರಿ ಜಿಲ್ಲಾ ಮಟ್ಟದ ಮೂರು ದಿನ ಕಾರ್ಯಾಗಾರ ಶಿಬಿರ ಹಾಗೂ ಶ್ರೀ ಲಿಂಗೈಕ್ಯ ಬಸವರಾಜದೇಶೀಕೇಂದ್ರ ಮಹಾ ಸ್ವಾಮಿಗಳ ೨೦ನೇ ಪುಣ್ಯ ಸಂಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ‘ಯೋಜನೆಯ ಪಾಲನೆಯನ್ನು ಚಾಚು ತಪ್ಪದೆ ಪಾಲಿಸಿದರೆ ಸ್ವಸಹಾಯ ಸಂಘಗಳು ಆರ್ಥಿಕ ವ್ಯವಹಾರವನ್ನು ಅಚ್ಚುಗಟ್ಟಾಗಿ ನಡೆಸುವ ಮೂಲಕ ಆರ್ಥಿಕ ಸ್ಥಿತಿಯನ್ನು ಹೆಚ್ಚು ಹೆಚ್ಚು ಪಡೆಯಬಹುದು. ಇದರಿಂದ ನೂರಾರು ಜನಗಳಿಗೆ ಉದ್ಯೋಗಗಳನ್ನು ಕೊಡುವ ಸಾರ್ಥಕತೆ ನಿಮ್ಮಲ್ಲಿ ಬರುತ್ತದೆ’ ಎಂದು ತಿಳಿಸಿದರು.‘ನಿಮ್ಮಲ್ಲಿ ಶಿಸ್ತು-ಸಮಯ-ಸಾಧನೆ ಪಾಲಿಸಿದರೆ ಜೀವನದಲ್ಲಿ ಮುಂದೆ ಬರುತ್ತೀರಾ. ಅದೇ ರೀತಿ ನಿಮ್ಮ ಜಿಲ್ಲೆಗೆ ೫೦ ಲಕ್ಷ ರು. ನೀಡಿದ್ದೇವೆ, ಅದನ್ನು ಉಪಯೋಗಿಸಿಕೊಂಡು ನಿಮ್ಮ ಕುಟುಂಬದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಬೇಕು. ಹೆಣ್ಣು ಕಲಿತರೆ ಊರೇ ಅಕ್ಷರ ಕಲಿತಂತಾಗುತ್ತದೆ. ಹಾಗಾಗಿ ನಮ್ಮ ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳಾ ಸಂಘಗಳನ್ನು ಅಭಿವೃದ್ಧಿಗೊಳಿಸಬೇಕು. ಈ ಕಾರ್ಯ ಬರುವ ಅಧಿಕ ಲಾಭದಲ್ಲಿ ನಿಮ್ಮ ಕುಟುಂಬ ಬೆಳೆಸಿಕೊಳ್ಳಿ’ ಎಂದು ತಿಳಿಸಿದರು.
‘ಮಂಗಳವಾರ ಶ್ರೀ ಸಿದ್ಧಗಂಗಾ ಮಠದ ಶ್ರೀಗಳು ನಮ್ಮ ಕ್ಷೇತ್ರಕ್ಕೆ ಆಗಮನ, ಲಿಂಗೈಕ್ಯ ಬಸವರಾಜ ದೇಶೀಕೇಂದ್ರ ಮಹಾ ಸ್ವಾಮಿಗಳ ೨೦ನೇ ಪುಣ್ಯ ಸಂಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು’ ಎಂದರು.ಮಠದ ಕಾರ್ಯದರ್ಶಿ ಎಚ್.ಎಸ್ ರಾಜಶೇಖರ್ ಮಾತನಾಡಿ, ‘ಇಂದಿನ ಸಮಾಜದಲ್ಲಿ ಹೆಣ್ಣಿಗೂ ಸಮಾನತೆ ಇದೆ. ಆದ ಕಾರಣ ನೀವು ಜೀವನದಲ್ಲಿ ಮುಂದೆ ಬಂದು ನಿಮ್ಮ ಕುಟುಂಬದ ನಿರ್ವಹಣೆಯನ್ನು ಚಾಚು ತಪ್ಪದೇ ಕಾರ್ಯ ನಿರ್ವಹಿಸಬೇಕು. ಆಗ ಶ್ರೀಗಳು ಹಾಗೂ ಸಂಘಕ್ಕೆ ಬೆಲೆ ಬರುವುದು. ನಿಮ್ಮ ಒಂದು ಸಾಧನೆ-ಶಿಸ್ತಿಗೆ ನಮ್ಮ ಗುರುಗಳ ಆಶೀರ್ವಾದ ಸದಾ ಇರುತ್ತದೆ’ ಎಂದು ತಿಳಿಸಿದರು.
ಹಳೇಬೀಡು ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಿತ್ಯಾನಂದ, ಕಾರ್ಯನಿರ್ವಾಹಕ ನಾಗಯ್ಯ, ಸಿದ್ದಾಪುರದ ಗುರುಲಿಂಗಣ್ಣ, ಪುಷ್ಪಗಿರಿ ಗ್ರಾಮೀಣ ಅಭಿವೃದ್ಧಿಯ ಸಂಸ್ಥೆಯ ಯೋಜನಾಧಿಕಾರಿ ವಿನೂತಧನಂಜಯ, ಹೆಬ್ಬಾಳ್ ಹಾಲಪ್ಪ ಇದ್ದರು.