ರಾಜ್ಯದಲ್ಲಿ ಹಾಲಿನ ಉತ್ಪಾದನೆ ನಿರಂತರವಾಗಿ ಹೆಚ್ಚಾಗುತ್ತಿದ್ದರೂ ಹಾಲು-ಮೊಸರು ದರದ ಏರಿಕೆಯಿಂದ ಮಾರುಕಟ್ಟೆಯಲ್ಲಿ ಮಾರಾಟ ಪ್ರಮಾಣ ಕುಸಿಯುತ್ತಿರುವುದು ಹಾಲು ಒಕ್ಕೂಟಗಳಿಗೆ ದೊಡ್ಡ ಆರ್ಥಿಕ ಸವಾಲಾಗಿ ಪರಿಣಮಿಸಿದೆ. ರೈತರಿಗೆ ನ್ಯಾಯಯುತ ದರ ನೀಡುವುದರ ಜತೆಗೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸಿ, ಒಕ್ಕೂಟಗಳ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲು ಒಕ್ಕೂಟದ ಅಧ್ಯಕ್ಷ ಎಚ್. ಡಿ. ರೇವಣ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದಲ್ಲಿ ಹಾಲಿನ ಉತ್ಪಾದನೆ ನಿರಂತರವಾಗಿ ಹೆಚ್ಚಾಗುತ್ತಿದ್ದರೂ ಹಾಲು-ಮೊಸರು ದರದ ಏರಿಕೆಯಿಂದ ಮಾರುಕಟ್ಟೆಯಲ್ಲಿ ಮಾರಾಟ ಪ್ರಮಾಣ ಕುಸಿಯುತ್ತಿರುವುದು ಹಾಲು ಒಕ್ಕೂಟಗಳಿಗೆ ದೊಡ್ಡ ಆರ್ಥಿಕ ಸವಾಲಾಗಿ ಪರಿಣಮಿಸಿದೆ. ರೈತರಿಗೆ ನ್ಯಾಯಯುತ ದರ ನೀಡುವುದರ ಜತೆಗೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸಿ, ಒಕ್ಕೂಟಗಳ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲು ಒಕ್ಕೂಟದ ಅಧ್ಯಕ್ಷ ಎಚ್. ಡಿ. ರೇವಣ್ಣ ತಿಳಿಸಿದರು.ನಗರದ ಹಾಸನ ಹಾಲು ಒಕ್ಕೂಟದ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿದಿನ ಸುಮಾರು ೧ ಕೋಟಿ ೧೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಅಕ್ಟೋಬರ್ ೩೦ರ ಮಾಹಿತಿಯಂತೆ ಕೇವಲ ಮೂರು ದಿನಗಳಲ್ಲಿ ಸುಮಾರು ೨.೯೩ ಲಕ್ಷ ಲೀಟರ್ ಹಾಲಿನ ಮಾರಾಟ ಕಡಿಮೆಯಾಗಿದ್ದು, ಮಸಾಲೆ ಮಜ್ಜಿಗೆ ಮಾರಾಟದಲ್ಲಿಯೂ ಸುಮಾರು ೧.೧೩ ಲಕ್ಷ ಲೀಟರ್ ಇಳಿಕೆಯಾಗಿದೆ. ಉತ್ಪಾದನೆ ಹೆಚ್ಚಾಗುತ್ತಿದ್ದರೂ ಮಾರಾಟ ಕುಸಿಯುತ್ತಿರುವುದರಿಂದ ಒಕ್ಕೂಟಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂದರು. ಪ್ರಸ್ತುತ ಒಕ್ಕೂಟಕ್ಕೆ ಪ್ರತಿ ತಿಂಗಳು ಸುಮಾರು ೮ ಕೋಟಿ ರೂ. ನಷ್ಟ ಉಂಟಾಗುತ್ತಿದೆ. ಹೆಚ್ಚುವರಿ ಹಾಲನ್ನು ಬೇರೆ ಮಾರುಕಟ್ಟೆಗಳಿಗೆ ಪೂರೈಸುವುದು, ಸಂಸ್ಕರಿಸಿ ಹಾಲಿನ ಪುಡಿಯಾಗಿ ಪರಿವರ್ತಿಸಿ ದಾಸ್ತಾನು ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಉತ್ಪಾದನೆ ಮತ್ತು ಮಾರಾಟದ ನಡುವಿನ ಅಂತರದಿಂದ ಸಂಗ್ರಹಣೆ, ಸಂಸ್ಕರಣೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ. ಕೆಲವು ಸಂದರ್ಭಗಳಲ್ಲಿ ಸುಮಾರು ನಾಲ್ಕು ಲಕ್ಷ ಲೀಟರ್ ಹಾಲಿನ ವಿಲೇವಾರಿಯೇ ದೊಡ್ಡ ಸವಾಲಾಗುತ್ತಿದೆ ಎಂದು ವಿವರಿಸಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಪೈಪೋಟಿ ತೀವ್ರಗೊಂಡಿದೆ. ಹೊರರಾಜ್ಯದ ಖಾಸಗಿ ಸಂಸ್ಥೆಗಳು ಕಡಿಮೆ ದರದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಉತ್ಪನ್ನಗಳ ದರ ಹೆಚ್ಚಾದರೆ ಗ್ರಾಹಕರು ಕಡಿಮೆ ಬೆಲೆಯ ಉತ್ಪನ್ನಗಳತ್ತ ಆಕರ್ಷಿತರಾಗುವ ಸಾಧ್ಯತೆಯಿದೆ. ಹೀಗಾಗಿ ರೈತರಿಗೆ ಉತ್ತಮ ದರ ನೀಡುವುದು ಮತ್ತು ಗ್ರಾಹಕರಿಗೆ ಹೊರೆಯಾಗದ ಬೆಲೆಯಲ್ಲಿ ಉತ್ಪನ್ನಗಳನ್ನು ಒದಗಿಸುವುದರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು. ಹೆಚ್ಚುವರಿ ಹಾಲಿನ ಸಮರ್ಪಕ ವಿಲೇವಾರಿ ಹಾಗೂ ಒಕ್ಕೂಟಗಳ ಆದಾಯ ಹೆಚ್ಚಳಕ್ಕೆ ಬೆಂಗಳೂರು ಮಾರುಕಟ್ಟೆ ಪ್ರಮುಖವಾಗಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಮಾರುಕಟ್ಟೆಗಳಲ್ಲಿ ಹಾಸನ ಹಾಲು ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ರೈತರು ಹಾಗೂ ಜನಪ್ರತಿನಿಧಿಗಳಿಂದಲೂ ಮನವಿಗಳು ಬಂದಿವೆ. ಬೆಂಗಳೂರು ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ದೊರೆತರೆ ಹೆಚ್ಚುವರಿ ಹಾಲನ್ನು ಸಮರ್ಪಕವಾಗಿ ಮಾರಾಟ ಮಾಡಲು ಹಾಗೂ ಒಕ್ಕೂಟವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅನುಕೂಲವಾಗಲಿದೆ. ಈ ವಿಚಾರವನ್ನು ಸರ್ಕಾರದ ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.ಉತ್ಪಾದಕರಿಗೆ ನ್ಯಾಯಯುತ ದರ ದೊರೆಯಬೇಕು:
ಹಾಲು ಉತ್ಪಾದಕರಿಗೆ ನ್ಯಾಯಯುತ ದರ ದೊರೆಯಬೇಕು ಎಂಬುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಹಿಂದೆ ರೈತರಿಗೆ ಅನುಕೂಲವಾಗುವಂತೆ ಹಾಲಿನ ಖರೀದಿ ದರ ಹೆಚ್ಚಿಸಲಾಗಿದ್ದು, ಸರ್ಕಾರದ ನಿರ್ದೇಶನದಂತೆ ಹೆಚ್ಚುವರಿ ಮೊತ್ತ ಹಾಗೂ ಪ್ರೋತ್ಸಾಹಧನ ನೀಡುವ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ. ರೈತರಿಗೆ ಪ್ರತಿದಿನದ ಪಾವತಿ ವ್ಯವಸ್ಥೆಯನ್ನೂ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರ ಆದಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಹಾಲಿನ ದರ ಹೆಚ್ಚಳದ ಬೇಡಿಕೆ ಸೇರಿದಂತೆ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪತ್ರ ಬರೆಯಲಾಗುವುದು ಎಂದರು.ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳಿಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಗಳೂ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕೋಲಾರ ಒಕ್ಕೂಟಕ್ಕೆ ಸುಮಾರು ನಾಲ್ಕು ಕೋಟಿ ರುಪಾಯಿ ಹಾಗೂ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ಸುಮಾರು ಒಂದು ಕೋಟಿ ರು. ನಷ್ಟ ಉಂಟಾಗಿರುವುದಾಗಿ ತಿಳಿಸಿದರು. ಆಯಾ ಒಕ್ಕೂಟಗಳ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಮಾರುಕಟ್ಟೆ ವಿಸ್ತರಣೆ ಹಾಗೂ ಆರ್ಥಿಕ ಸುಧಾರಣೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ಹೈನುಗಾರಿಕೆ ಕ್ಷೇತ್ರದಲ್ಲಿ ರೈತರು, ಗ್ರಾಹಕರು ಮತ್ತು ಹಾಲು ಒಕ್ಕೂಟಗಳು ಪರಸ್ಪರ ಅವಲಂಬಿತವಾಗಿವೆ. ರೈತರ ಹಿತಾಸಕ್ತಿಯನ್ನು ಕಡೆಗಣಿಸದೆ, ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಮಾರುಕಟ್ಟೆ ವಿಸ್ತರಣೆ, ಉತ್ಪನ್ನಗಳ ಗುಣಮಟ್ಟ ಸುಧಾರಣೆ ಹಾಗೂ ಆರ್ಥಿಕ ಶಿಸ್ತಿನ ಮೂಲಕ ಹಾಲು ಉದ್ಯಮವನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸಲಾಗುವುದು ಎಂದು ಎಚ್. ಡಿ. ರೇವಣ್ಣ ತಿಳಿಸಿದರು.ಇದೇ ವೇಳೆ ಎಚ್.ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಹಾಲು ಒಕ್ಕೂಟದ ಮ್ಯಾನೇಜರ್ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.