ಗ್ಯಾರಂಟಿಯಿಂದ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟು: ದೇವರಾಜ್‌ ಶೆಟ್ಟಿ

| Published : Jun 19 2024, 01:00 AM IST

ಗ್ಯಾರಂಟಿಯಿಂದ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟು: ದೇವರಾಜ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ತೈಲ ಬೆಲೆ ಇಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಏರಿಕೆ ಮಾಡಿರುವ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದಲ್ಲಿ ಮಂಗಳವಾರ ವಿನೂತನವಾಗಿ ಪ್ರತಿಭಟನೆ ನಡೆಸಿತು.ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ನೇತೃತ್ವದಲ್ಲಿ ಇಲ್ಲಿನ ತಾಲೂಕು ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟಿತು.

ಕಾರಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಹನುಮಂತಪ್ಪ ವೃತ್ತದಿಂದ ಎಂ.ಜಿ. ರಸ್ತೆಯಲ್ಲಿ ಸಾಗಿದ ಮೆರವಣಿಗೆ ಆಜಾದ್‌ ಪಾರ್ಕ್‌ ವೃತ್ತಕ್ಕೆ ತಲುಪಿತು. ದಾರಿಯ ಉದ್ದಕ್ಕೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ಗ್ಯಾರಂಟಿ ಯೋಜನೆಯಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ವಿವಿಧ ಬೆಲೆ ಏರಿಕೆ ಮಾಡಲು ಲೋಕಸಭಾ ಚುನಾವಣಾ ಫಲಿತಾಂಶ ಕಾಯುತ್ತಿತ್ತು ಎನಿಸುತ್ತಿದೆ. ಕಾರಣ, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ ಎಂದರು.

ತೈಲ ಬೆಲೆ ಏರಿಕೆ ಮಾಡಿದ್ದರಿಂದ ದಿನ ಬಳಕೆ ವಸ್ತುಗಳ ಸಾಗಾಣಿಕೆ ದರವೂ ಹೆಚ್ಚಳವಾಗಲಿದೆ. ಹಾಗಾಗಿ ಬೆಲೆಯೂ ಕೂಡ ಏರಲಿದೆ. ಇದರಿಂದ ಎಲ್ಲಾ ವರ್ಗದ ಜನರ ಜೀವನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೇಳಿದರು. ಕೆಲವು ದಿನಗಳ ಹಿಂದೆ ಪೆಟ್ರೋಲ್‌ ಬೆಲೆ 3 ರು. ಹಾಗೂ ಡಿಸೇಲ್‌ ದರ ಲೀಟರ್‌ಗೆ 3 ರು. 50 ಪೈಸೆಯನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಈ ಮೂಲಕ ಈ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಮಂತ್ರಿಗಳ ಖಜಾನೆಯನ್ನು ತುಂಬಿಸಲು ಜನರಿಗೆ ಬೆಲೆ ಏರಿಕೆ ಬಿಸಿ ತಾಕಿಸಿದೆ ಎಂದು ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ ನೆಮ್ಮದಿ ಜೀವನ ಇಲ್ಲವಾಗಿದೆ. ಜನ ಸಾಮಾನ್ಯರ ಸ್ಥಿತಿಯೂ ಕೂಡ ಇದೇ ಆಗಿದೆ. ಜನರು ಎಚ್ಚೆತ್ತುಕೊಳ್ಳಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಚಿಕ್ಕಮಗಳೂರು ನಗರಾಧ್ಯಕ್ಷ ಪುಷ್ಪರಾಜ್‌ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳಾಗಿದೆ. ಇದು, ರೈತ, ಬಡವರ ವಿರೋಧಿ ಸರ್ಕಾರ. ಹಲವು ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರ ಜತೆಗೆ ಪಹಣಿ, ಛಾಪ ಕಾಗದದ ಮೇಲೆ ಸಹ ಹೆಚ್ಚಳ ಮಾಡಿದೆ. ಕೂಡಲೇ ತೈಲ ಬೆಲೆ ಇಳಿಸಬೇಕು ಇಲ್ಲದೆ ಹೋದರೆ ಪಕ್ಷದಿಂದ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಎಚ್‌.ಸಿ. ಕಲ್ಮರುಡಪ್ಪ, ಮುಖಂಡರಾದ ಡಾ. ನರೇಂದ್ರ , ರಾಜಪ್ಪ, ಸೋಮಶೇಖರ್‌, ರವಿಕುಮಾರ್‌, ಕೋಟೆ ರಂಗನಾಥ್‌, ಪ್ರೇಮ್‌ಕುಮಾರ್‌, ಕುರುವಂಗಿ ವೆಂಕಟೇಶ್‌, ಹಿರೇಮಗಳೂರು ಪುಟ್ಟಸ್ವಾಮಿ, ಜಯಣ್ಣ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.