ಆರ್ಥಿಕ ಅಶಿಸ್ತಿನಿಂದ ರಾಜ್ಯ ಸರ್ಕಾರ ದಿವಾಳಿ ಅಂಚಿಗೆ: ಕಾಗೇರಿ

| Published : Jun 18 2024, 12:59 AM IST / Updated: Jun 18 2024, 10:02 AM IST

ಆರ್ಥಿಕ ಅಶಿಸ್ತಿನಿಂದ ರಾಜ್ಯ ಸರ್ಕಾರ ದಿವಾಳಿ ಅಂಚಿಗೆ: ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಡಳಿತ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಅಶಿಸ್ತಿನಿಂದ ರಾಜ್ಯ ಸರ್ಕಾರ ದಿವಾಳಿ ಅಂಚಿಗೆ ತಲುಪಿದ್ದು, ಬೇರೆ ಬೇರೆ ರಾಜ್ಯದ ಚುನಾವಣೆ ಮತ್ತು ಲೋಕಸಭಾ ಚುನಾವಣೆಗೆ ರಾಜ್ಯದಿಂದ ಹಣ ಕಳುಹಿಸಿದ್ದಾರೆ. ಇದೊಂದು ಎಟಿಎಂ ಸರ್ಕಾರವಾಗಿದೆ ಎಂದು ಉತ್ತರಕನ್ನಡದ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.

ಸೋಮವಾರ ನಗರದ ತಮ್ಮ ಕಾರ್ಯಾಲಯದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಡಳಿತ ನಿರ್ವಹಿಸಲು ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ತಕ್ಷಣ ರಾಜೀನಾಮೆ ನೀಡಲಿ. ಡಾ. ಜಿ. ಪರಮೇಶ್ವರ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸಲಿ. ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ನೀಡಿದ್ದಾರೆ ಎಂಬ ದ್ವೇಷದ ರಾಜಕಾರಣಕ್ಕೆ ಬೆಲೆ ಏರಿಕೆ ಮಾಡಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆ ಮಾಡಿರುವುದು ಖಂಡನೀಯ. ಬೆಲೆ ಏರಿಕೆ ಸರ್ಕಾರಕ್ಕೆ ಧಿಕ್ಕಾರ ಹೇಳಬೇಕಿದೆ ಎಂದರು.

ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣಕ್ಕೆ ಮುಖ್ಯಮಂತ್ರಿ ನೇರ ಹೊಣೆಯಾಗಿದ್ದಾರೆ. ಆದರೆ ಸಚಿವರನ್ನು ಮತ್ತು ಕೆಲ ಅಧಿಕಾರಿಗಳನ್ನು ಮಾತ್ರ ತಲೆದಂಡ ಮಾಡಲಾಗಿದ್ದು, ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಕಳೆದ ೧೦ ವರ್ಷದಲ್ಲಿ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಮುಂದಿನ ವರ್ಷದಲ್ಲಿ ಇನಷ್ಟು ಅಭಿವೃದ್ಧಿಯಾಗಲಿದೆ ಎಂದರು.

ಅಭಿವೃದ್ಧಿಯನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಯೋಜನೆ ಮತ್ತು ರಾಜ್ಯ ಸರ್ಕಾರದ ಯೋಜನೆಯನ್ನು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ರಯತ್ನ ನಡೆಸುತ್ತೇನೆ. ಈಗಾಗಲೇ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸುತ್ತಿದ್ದೇನೆ. ಅಭಿವೃದ್ಧಿಯೇ ನನ್ನ ಮುಖ್ಯ ಗುರಿಯ ಜತೆ ಮೊದಲ ಆದ್ಯತೆಯಾಗಲಿದ ಎಂದರು.

ಹೆಬ್ಬಾರ್ ಮೇಲೆ ರಾಜ್ಯ ನಾಯಕರ ತೀರ್ಮಾನ: ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಕಾಗೇರಿ, ಶಿವರಾಮ ಹೆಬ್ಬಾರ ಕುರಿತು ಮಾಧ್ಯಮದವರಿಗೆ ಹೇಳಿದ್ದೇನೆ. ಪುನಃ ಪುನಃ ಅದನ್ನೇ ಹೇಳಲು ಇಷ್ಟಪಡುವುದಿಲ್ಲ. ಅವರ ಕುರಿತು ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದಷ್ಟೇ ಹೇಳಿದರು.