17ನೇ ವಾರ್ಡ್‌ ಪಾಲಿಕೆ ಸದಸ್ಯರನ್ನು ಹುಡುಕಿಕೊಡಿ

| Published : Jul 12 2024, 01:33 AM IST

17ನೇ ವಾರ್ಡ್‌ ಪಾಲಿಕೆ ಸದಸ್ಯರನ್ನು ಹುಡುಕಿಕೊಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಾರ್ಡ್‌ ಪ್ರಮುಖ ರಸ್ತೆ ಪ್ರತಿನಿತ್ಯ ನೂರಾರು ಜನರು, ಶಾಲಾ ಮಕ್ಕಳು ಓಡಾಡುವ ಕಾನ್ವೆಂಟ್ ರಸ್ತೆಯಲ್ಲಿ ಕಳೆದ 3 ದಿನಗಳಿಂದ ಒಳಚರಂಡಿ ತುಂಬಿ ಹರಿಯುತ್ತಿದ್ದರೂ ಸಹ ಪಾಲಿಕೆ ಸದಸ್ಯ ಅಜಯಕುಮಾರ ಇತ್ತ ತಿರುಗಿ ನೋಡಿಲ್ಲ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಮಹಾನಗರ ಪಾಲಿಕೆ 17ನೇ ವಾರ್ಡ್ ಪಿ.ಜೆ.ಬಡಾವಣೆ ಸದಸ್ಯ ಬಿ.ಜಿ.ಅಜಯಕುಮಾರ್ ಕಾಣೆಯಾಗಿದ್ದು, ಹುಡುಕಿಕೊಡುವಂತೆ ಪಿ.ಜೆ.ಬಡಾವಣೆ ನಾಗರಿಕರು ಮನವಿ ಮಾಡಿದ್ದಾರೆ.

ವಾರ್ಡ್‌ನಲ್ಲಿ ಸಾಕಷ್ಟು ತೊಂದರೆ ಇದ್ದರೂ ಸಹ ವರ್ಷಗಳ ಕಾಲ ಪಾಲಿಕೆ ಸದಸ್ಯರು ಬರದೇ ನಿರ್ಲಕ್ಷ್ಯ ವಹಿಸಿದ್ದಾರೆ. ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಹಾನಗರ ಪಾಲಿಕೆಗೆ ವಾರ್ಡ್ ಸಮಸ್ಯೆ ಬಗ್ಗೆ ತಿಳಿಸಿದರೆ ಸದಸ್ಯರನ್ನು ಸಂಪರ್ಕಿಸುವಂತೆ ತಿಳಿಸುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.

ವಾರ್ಡ್‌ ಪ್ರಮುಖ ರಸ್ತೆ ಪ್ರತಿನಿತ್ಯ ನೂರಾರು ಜನರು, ಶಾಲಾ ಮಕ್ಕಳು ಓಡಾಡುವ ಕಾನ್ವೆಂಟ್ ರಸ್ತೆಯಲ್ಲಿ ಕಳೆದ 3 ದಿನಗಳಿಂದ ಒಳಚರಂಡಿ ತುಂಬಿ ಹರಿಯುತ್ತಿದ್ದರೂ ಸಹ ಪಾಲಿಕೆ ಸದಸ್ಯ ಅಜಯಕುಮಾರ ಇತ್ತ ತಿರುಗಿ ನೋಡಿಲ್ಲ ಎಂದು ಆರೋಪಿಸಿದ್ದಾರೆ.

ಪ್ರತಿನಿತ್ಯ ಸಾವಿರಾರು ಮಕ್ಕಳು ಓಡಾಡುವ ಈ ರಸ್ತೆಯಲ್ಲಿ ಹಾಗೂ ಪಿ.ಜೆ.ಬಡಾವಣೆಯಲ್ಲಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿರುವುದರಿಂದ ಸಾವಿರಾರು ಜನ ಆಗಮಿಸಲಿದ್ದು, ಒಳಚರಂಡಿ ನೀರು ರಸ್ತೆಯಲ್ಲಿ ಹರಿಯುವುದರಿಂದ ಮಹಾಮಾರಿ ಡೆಂಘೀ ಅಂಥಹ ಸಾಂಕ್ರಾಮಿಕ ರೋಗಗಳಿಗೆ ಮಕ್ಕಳು ಬಲಿ ಆಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದಿನೇಶ್ ಕೆ.ಶೆಟ್ಟಿ ಮಹಾನಗರ ಪಾಲಿಕೆ ಸದಸ್ಯರಾಗಿದ್ದ ವೇಳೆ ವಾರ್ಡ್‌ ಎಲ್ಲಾ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಿ ಬೀದಿದೀಪ, ಕುಡಿವ ನೀರಿನ ಸೌಲಭ್ಯ ಸೇರಿ ಮೂಲಸೌಕರ್ಯ ಒದಗಿಸಿದ್ದರು. ಆದರೆ ಅಜಯಕುಮಾರ್ ಪಾಲಿಕೆ ಸದಸ್ಯರಾದ ನಂತರ ಉತ್ತಮ ರಸ್ತೆ ಮತ್ತೆ ಕಿತ್ತು ರಸ್ತೆ ಮಾಡಿದರೂ ಸಹ ಒಳಚರಂಡಿ ವ್ಯವಸ್ಥೆ ಹಾಳು ಮಾಡಿ ಇಂದು ಒಳಚರಂಡಿ ಮ್ಯಾನ್‌ಹೋಲ್ ಬಾಯಿತೆರೆದಿದೆ ಎಂದು ದೂರಿದ್ದಾರೆ.

ಮಹಾನಗರ ಪಾಲಿಕೆ ಸದಸ್ಯ ಬಿ.ಜಿ.ಅಜಯಕುಮಾರ್ ಕಳೆದ 2-3 ವರ್ಷಗಳಿಂದ ವಾರ್ಡ್‌ನಲ್ಲಿ ಕಾಣಿಸದೇ ಇದ್ದು, ಅವರು ಪಾಲಿಕೆ ಸದಸ್ಯರು ಇದ್ದರೋ ಇಲ್ಲವೋ ಎಂಬುದನ್ನು ಆಯುಕ್ತರು ಸ್ಪಷ್ಟನೆ ನೀಡಲಿ, ಇಲ್ಲವೇ ಸಾರ್ವಜನಿಕರ ಕೆಲಸ ಮಾಡದ ಅಜಯಕುಮಾರ್‌ರನ್ನು ಸದಸ್ಯ ಸ್ಥಾನದಿಂದ ವಜಾಗೊಳಿಸಲಿ ಎಂದು ನಾಗರಿಕರಾದ ಮಧುಪವಾರ್, ವಾಟಾಳ್ ನಾಗರಾಜ್, ಪ್ರಭುಕುಮಾರ್, ಬುನಿಯನ್ ಭಾಸ್ಕರ್, ರಾಜು ಚೌಹಾಣ್, ಪರಸಪ್ಪ, ರೇವಣಪ್ಪ, ಸುರೇಶ್, ಕಿಶೋರ್ ಜೈನ್, ಗುರುರಾಜ್, ಅಶು ಸಾವನ್, ಪರಶುರಾಮ್, ಪ್ರದೀಪ್, ಗೀತಾ ಜಗದೀಶ್, ಪ್ರಿಯಾ, ಪ್ರೇಮಾ, ಲಲಿತಮ್ಮ, ಜಗದೀಶ್, ಗೋಪಾಲ್, ಶ್ರೀಕಾಂತ್ ಬಗೇರ ಇನ್ನು ಮುಂತಾದರು ಆಗ್ರಹಿಸಿದ್ದಾರೆ.