ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿ
ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ 12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಲಿಂಗರಾಜ ಹೇಳಿದರು.ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಬದುಕಿನ ಸಾರ್ಥಕತೆಯನ್ನು ಪ್ರತಿಯೊಬ್ಬರೂ ವೃತ್ತಿಯಲ್ಲಿ ಕಾಣಬೇಕು. ಸೇವೆಯೇ ನಮ್ಮ ಇಲಾಖೆಯ ಮುಖ್ಯ ಗುರಿ. ಸೇವೆಗಳಿಗಾಗಿಯೇ ಬರುವ ಸಾರ್ವಜನಿಕರಿಗೆ ಗೌರವವನ್ನು ಕೊಡಿ. ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಎರಡು ಸೌಜನ್ಯದ ಮಾತುಗಳೇ ದೊಡ್ಡ ಶಕ್ತಿ ಎಂದರು.
ಅಲ್ಲದೇ, ವೈದ್ಯರ ಭಾರವನ್ನು ಕಡಿಮೆ ಮಾಡುವ ಶೂಶ್ರೂಷಕಿಯರಿಗೆ ಇಂದು ಗೌರವವನ್ನು ಸಲ್ಲಿಸಿದ್ದು, ನಿಜಕ್ಕೂ ಒಳ್ಳೆಯ ಕಾರ್ಯ ಎಂದು ಹೇಳಿದರು.ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಮಾತನಾಡಿ, ಯಾವುದೇ ಆಸ್ಪತ್ರೆಗೆ ಹೋದರೂ ನಮಗೆ ಮೊದಲು ಭೇಟಿಯಾಗೋದು ನರ್ಸ್‌ಗಳು. ಅವರ ಸೇವೆ ಅತ್ಯಮೂಲ್ಯವಾದ ಸೇವೆ. ಗರ್ಭಾವಸ್ಥೆಯಿಂದ ಹಿಡಿದು ಮಗುವಿನ ಜನನದವರೆಗೂ ಆರೈಕೆ ಮಾಡುವವರೂ ನರ್ಸ್‌ಗಳು. ಅವರ ಸೇವೆಯನ್ನು ನೆನೆಯುವ ಸಲುವಾಗಿ ಮಾಡಿರುವ ಈ ಕಾರ್ಯಕ್ರಮ ಉತ್ತಮವಾದುದು. ನಿಮ್ಮ ಸೇವೆ ನಿರಂತರವಾಗಿ ಸಾಗಲಿ ಎಂದರು.
ಬಳಿಕ ವೈದ್ಯ ಡಾ. ರವೀಂದ್ರ ಮಾತನಾಡಿ, ವೃತ್ತಿಯನ್ನು ಪ್ರೀತಿಸಿ, ಗೌರವಿಸಿ, ಯಾವುದು ಕೀಳಲ್ಲ. ಪ್ರತಿಯೊಬ್ಬ ರೋಗಿಯು ತಮ್ಮ ಬಳಿ ಬಂದಾಗ ಯಾವುದೇ ಹಿಂಜರಿಕೆಯಿಲ್ಲದೇ ಮಾತನಾಡುವಂತೆ ತಿಳಿಸಿದರು.ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಆಸ್ಪತ್ರೆಯ ಎಲ್ಲಾ ನರ್ಸ್‌ಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಗೌರಿಶಂಕರ್, ವೈದ್ಯರಾದ ಡಾ. ಪ್ರಕಾಶ, ಡಾ. ನಂದಕುಮಾರ, ಡಾ. ಪ್ರಕಾಶ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.