ಸಾರಾಂಶ
- ರೈತರ ಅಹವಾಲು ಆಲಿಸದ ಕೃಷ್ಣಬೈರೇಗೌಡ ವಿರುದ್ಧ ಪ್ರತಿಭಟನೆ
- - - - ಜಿಲ್ಲಾ ಕೇಂದ್ರಕ್ಕೆ ಸಚಿವರು ಬಾರದೇ ರೈತರ ಬಗ್ಗೆ ನಿರ್ಲಕ್ಷ್ಯ: ಆರೋಪ- ರೈತರ ಸಂಕಷ್ಟಗಳನ್ನು ಸೌಜನ್ಯಕ್ಕೂ ಆಲಿಸಲಿಲ್ಲ: ಬಲ್ಲೂರು ರವಿಕುಮಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಅತಿವೃಷ್ಟಿ ಬೆಳೆಹಾನಿ ಪರಿಶೀಲಿಸಲು ಜಗಳೂರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ದಾರೆ. ಆದರೆ, ಡಿಸಿ ಕಚೇರಿಗೆ ಬಂದು ರೈತರ ಸಮಸ್ಯೆ ಆಲಿಸದೇ ಹೋಗಿದ್ದಾರೆ ಎಂದು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು, "ಸಚಿವ ಕೃಷ್ಣ ಭೈರೇಗೌಡ ಕಾಣೆಯಾಗಿದ್ದು, ಹುಡುಕಿ, ಜಿಲ್ಲಾಧಿಕಾರಿ ಕಚೇರಿಗೆ ಕರೆ ತನ್ನಿ " ಎಂಬುದಾಗಿ ವಿದ್ಯಾ ನಗರ ಠಾಣೆ ಪೊಲೀಸರಿಗೆ ದೂರು ನೀಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.ವಿದ್ಯಾನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕರಿಗೆ ರೈತ ಸಂಘ ರಾಜ್ಯ ಕಾರ್ಯದರ್ಶಿ ರವಿಕುಮಾರ ಬಲ್ಲೂರು ಇತರರ ನೇತೃತ್ವದಲ್ಲಿ ದೂರು ನೀಡಲಾಯಿತು. ಅನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ರೈತರು ಜಿಲ್ಲಾಡಳಿತ ಭವನ ಬಳಿ ಸಚಿವರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಬಲ್ಲೂರು ರವಿಕುಮಾರ ಮಾತನಾಡಿ, ಅತಿವೃಷ್ಟಿ ಹಾನಿ ವೀಕ್ಷಣೆಗೆಂದು ತೋರಿಕೆಗೆಂಬಂತೆ ಸಚಿವರು ಜಿಲ್ಲೆಯ ಜಗಳೂರು ತಾಲೂಕಿನ ಒಂದೆರೆಡು ಕಡೆ ಭೇಟಿ ನೀಡಿದ್ದಾರೆ. ಇದರ ಹೊರತು ಜಿಲ್ಲಾ ಕೇಂದ್ರಕ್ಕೆ ಬರಲಿಲ್ಲ. ಜಿಲ್ಲೆಯ ರೈತರ ಸಂಕಷ್ಟಗಳನ್ನು ಸೌಜನ್ಯಕ್ಕೂ ಆಲಿಸುವ ಕೆಲಸ ಮಾಡಲಿಲ್ಲ. ಜಿಲ್ಲೆಯ ರೈತರನ್ನು ಕಂದಾಯ ಸಚಿವರು ಕಡೆಗಣಿಸಿದ್ದಾರೆ ಎಂದು ದೂರಿದರು.ಹರಿಹರ ತಾಲೂಕು ಮಲೆಬೆನ್ನೂರು ಹೋಬಳಿ ಗ್ರಾಮಗಳಾದ ಕೊಮಾರನಹಳ್ಳಿ, ಕೊಪ್ಪ, ಹಾಲಿವಾಣ, ದಿಬ್ಬದಹಳ್ಳಿ, ಜಿಟಿ ಕಟ್ಟಿ, ಕೊಕ್ಕನೂರು, ಹಳ್ಳಿಹಾಳ್, ಬೇವಿನಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ಸುಮಾರು 25ರಿಂದ 30 ವರ್ಷ ಕಾಲ ಭೂಮಿಯಲ್ಲಿರುವ ಮುಳ್ಳು- ಕಲ್ಲುಗಳನ್ನು ರೈತರು ಸ್ವಚ್ಛಗೊಳಿಸಿ, ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಯಾಗಿಲ್ಲ. ಸರ್ಕಾರ ಕಾಟಾಚಾರಕ್ಕೆ ಅತಿವೃಷ್ಟಿ ಹಾನಿ ಪರಿಶೀಲಿಸುತ್ತಿದೆ ಎಂದು ಕೃಷ್ಣಬೈರೇಗೌಡ ನಡೆಯನ್ನು ಖಂಡಿಸಿದರು.
- - --25ಕೆಡಿವಿಜಿ6:
ದಾವಣಗೆರೆಯಲ್ಲಿ ರೈತ ಸಂಘ- ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಸೇರಿದಂತೆ ರೈತರು ಪೊಲೀಸರಿಗೆ ಮನವಿ ಅರ್ಪಿಸಿದರು.