ಕನ್ನಡಪ್ರಭ ವಾರ್ತೆ ಬಾಗಲಕೋಟೆಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಮಾಹಿತಿ ಸಕಾಲದಲ್ಲಿ ಮಾಹಿತಿ ನೀಡದ ಅಧಿಕಾರಿಗಳ ವೇತನದಿಂದಲೇ ದಂಡದ ಮೊತ್ತವನ್ನು ಕಡತಗೊಳಿಸುವ ಕ್ರಮ ಜಾರಿಯಾಗಲಿದೆ ಎಂದು ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಮಾಹಿತಿ ಸಕಾಲದಲ್ಲಿ ಮಾಹಿತಿ ನೀಡದ ಅಧಿಕಾರಿಗಳ ವೇತನದಿಂದಲೇ ದಂಡದ ಮೊತ್ತವನ್ನು ಕಡತಗೊಳಿಸುವ ಕ್ರಮ ಜಾರಿಯಾಗಲಿದೆ ಎಂದು ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ತಿಳಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಮಾಹಿತಿ ಹಕ್ಕು ಕಾಯ್ದೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತದ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಕಾಯ್ದುಕೊಳ್ಳುವ ಅತ್ಯಂತ ಪ್ರಮುಖ ಕಾಯ್ದೆಯಾಗಿದೆ. ಈ ಕಾಯ್ದೆ ಮೂಲಕ ಪ್ರಜೆಗಳಿಗೆ ಸರ್ಕಾರದ ಆಡಳಿತದ ಕುರಿತು ಪ್ರಶ್ನಿಸುವ ಹಾಗೂ ಅಗತ್ಯ ಮಾಹಿತಿ ಪಡೆಯುವ ಕಾನೂನುಬದ್ಧ ಅಧಿಕಾರ ದೊರೆತಿದೆ ಎಂದು ಚನ್ನಾಳ ಹೇಳಿದ್ದಾರೆ.

ವಿಶ್ವದ 112ಕ್ಕೂ ಹೆಚ್ಚು ದೇಶಗಳಲ್ಲಿ ಇದೇ ರೀತಿಯ ಮಾಹಿತಿ ಹಕ್ಕು ಕಾಯ್ದೆಗಳು ಜಾರಿಯಲ್ಲಿದ್ದು, ಇದಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ಭಾರತದಲ್ಲಿ 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಬಂದಿದ್ದು, ಅದೇ ವರ್ಷ ಕರ್ನಾಟಕದಲ್ಲಿಯೂ ಕಾಯ್ದೆ ಜಾರಿಗೆ ಬಂದಿದೆ. ದೇಶದಲ್ಲಿಯೇ ಆರಂಭಿಕವಾಗಿ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಕರ್ನಾಟಕ ಮಾಹಿತಿ ಆಯೋಗವು ಪ್ರಕರಣಗಳ ವಿಲೇವಾರಿಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೇರಿದೆ ಎಂದರು.

ಸಕಾಲದಲ್ಲಿ ಮಾಹಿತಿ ನೀಡದೆ ದಂಡನೆಗೆ ಒಳಗಾಗುವ ಅಧಿಕಾರಿಗಳ ವಿರುದ್ಧ ಇತ್ತೀಚಿನ ಸರ್ಕಾರದ ನಿರ್ದೇಶನದಂತೆ ಎಚ್.ಆರ್.ಎಂ.ಎಸ್. ವ್ಯವಸ್ಥೆಯ ಮೂಲಕ ನೇರವಾಗಿ ವೇತನದಿಂದಲೇ ದಂಡದ ಮೊತ್ತ ಕಡಿತಗೊಳಿಸುವ ಕ್ರಮ ಜಾರಿಗೆ ಬರಲಿದೆ. ಆದ್ದರಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು, ನಿಗದಿತ ಕಾಲಮಿತಿಯೊಳಗೆ ಅರ್ಜಿದಾರರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ಶಿಸ್ತು ಕ್ರಮದಿಂದ ತಪ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಪೊಲೀಸ್, ಕಂದಾಯ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಅಭಿಯಂತರರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ದಂಡ ವಿಧಿಸಿ ಆದೇಶಗಳನ್ನು ಹೊರಡಿಸಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ಮಾಹಿತಿ ನೀಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಿಂದ ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚುವುದರ ಜತೆಗೆ, ಸಾರ್ವಜನಿಕರಿಗೆ ಸರ್ಕಾರದ ಕಾರ್ಯವೈಖರಿ ಕುರಿತು ಅಗತ್ಯ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.