ಎಂಟು ವಿಧೇಯಕಗಳಿಗೆ ಗುರುವಾರದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವೇಷ ಭಾಷಣ, ದ್ವೇಷ ಹರಡುವಿಕೆ ಅಥವಾ ಹಿಂಸೆಗೆ ಪ್ರಚೋದಿಸುವವರಿಗೆ ಒಂದು ಲಕ್ಷ ರು.ವರೆಗೆ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕ-2025’ ಹಾಗೂ ದೇಗುಲ ವ್ಯವಸ್ಥಾಪನಾ ಸಮಿತಿಗಳ ಸದಸ್ಯತ್ವಕ್ಕೆ ಕುಷ್ಠ ರೋಗಿಗಳಿಗೆ ವಿಧಿಸಿದ್ದ ನಿರ್ಬಂಧ ರದ್ದುಪಡಿಸುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2025 ಸೇರಿ ಎಂಟು ವಿಧೇಯಕಗಳಿಗೆ ಗುರುವಾರದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕ-2025 ಕಳೆದ ಜೂನ್ ತಿಂಗಳಲ್ಲೇ ಚರ್ಚೆಗೆ ಬಂದಿದ್ದರೂ, ಕೆಲ ಗೊಂದಲಗಳಿಂದಾಗಿ ಅದನ್ನು ತಡೆಹಿಡಿಯಲಾಗಿತ್ತು.
ಗುರುವಾರದ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಿರುವ ವಿಧೇಯಕದಲ್ಲಿ ಧರ್ಮ, ಜಾತಿ, ಜನಾಂಗ, ಭಾಷೆ, ಲಿಂಗ, ಜನ್ಮಸ್ಥಳ ಅಥವಾ ಲೈಂಗಿಕ ದೃಷ್ಟಿಕೋನಗಳ ಆಧಾರದ ಮೇಲೆ ದ್ವೇಷ ಹರಡುವವರಿಗೆ ಅಥವಾ ಹಿಂಸೆಗೆ ಪ್ರಚೋದನೆ ನೀಡುವವರಿಗೆ ಮೊದಲ ಬಾರಿಯ ಉಲ್ಲಂಘನೆಗೆ 1 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 50,000 ರು.ವರೆಗೆ ದಂಡ ವಿಧಿಸಲು ಪ್ರಸ್ತಾಪಿಸಲಾಗಿದೆ.ಜತೆಗೆ ಪುನರಾವರ್ತಿತ ಉಲ್ಲಂಘನೆಗೆ 1 ಲಕ್ಷ ರು.ವರೆಗೆ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಸಾಮಾಜಿಕ ಜಾಲತಾಣಗಳಿಗೂ ಅನ್ವಯ:ದ್ವೇಷ ಹರಡುವಿಕೆ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಹೊಣೆಗಾರಿಕೆ ಅತ್ಯಂತ ಮಹತ್ವದ ಅಂಶ. ದ್ವೇಷವನ್ನು ಪತ್ರಿಕೆ, ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಹರಡಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಕುಷ್ಠರೋಗಿಗಳಿಗೆ ಇರುವ ನಿರ್ಬಂಧ ತೆರವು:ಕುಷ್ಠರೋಗಿಗಳು, ಕುಷ್ಠರೋಗದಿಂದ ಗುಣ ಹೊಂದಿರುವವರು, ತತ್ಸಮಾನ ಭಯಾನಕ ಕಾಯಿಲೆ ಹೊಂದಿರುವವರಿಗೆ ದೇಗುಲ ವ್ಯವಸ್ಥಾಪನಾ ಸಮಿತಿಗಳಲ್ಲಿ ಸದಸ್ಯತ್ವ ನೀಡಲು ಅಡ್ಡಿಯಾಗಿದ್ದ ನಿಯಮಗಳನ್ನು ರದ್ದುಪಡಿಸಿ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ-2025’ಕ್ಕೆ ತಿದ್ದುಪಡಿ ತರಲು ಸಂಪುಟದಲ್ಲಿ ನಿರ್ಧರಿಸಲಾಗಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 25(4)(1) ಮತ್ತು (2)ರಲ್ಲಿ, ಕುಷ್ಟರೋಗದಿಂದ ಬಳಲುತ್ತಿರುವವರು ಅಥವಾ ಭಯಂಕರ ಕಾಯಿಲೆ ಉಳ್ಳವರು ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಲು ಅನರ್ಹರು ಎಂಬ ನಿಯಮವಿತ್ತು. ಇದು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ತಾರತಮ್ಯ ಎಂಬ ಟೀಕೆಗಳಿದ್ದವು.ಅಲ್ಲದೆ, ಸುಪ್ರೀಂ ಕೋರ್ಟ್ ಈ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಕುಷ್ಠರೋಗಿಗಳಿಗೆ ಆಗುತ್ತಿರುವ ತಾರತಮ್ಯ ಬಗೆಹರಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಕೈಬಿಡಲು ತೀರ್ಮಾನಿಸಲಾಗಿದೆ.
ಚಾಮುಂಡೇಶ್ವರಿ, ಘಾಟಿ ಸುಬ್ರಹ್ಮಣ್ಯ ಪ್ರಾಧಿಕಾರ ವಿಧೇಯಕಕ್ಕೆ ತಿದ್ದುಪಡಿ:ಪ್ರಮುಖ ದೇವಾಲಯಗಳ ಅಭಿವೃದ್ಧಿ ಪ್ರಾಧಿಕಾರಗಳ ಕಾರ್ಯದರ್ಶಿ ಹುದ್ದೆಗೆ ಕೇವಲ ಧಾರ್ಮಿಕ ದತ್ತಿ ಇಲಾಖೆಯ (ಮುಜರಾಯಿ) ಅನುಭವಿ ಅಧಿಕಾರಿಗಳನ್ನೇ ನೇಮಿಸಲು ಸರ್ಕಾರ ನಿರ್ಧರಿಸಿದೆ.
ಇದಕ್ಕೆ ಪೂರಕವಾಗಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ‘ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ’ ಹಾಗೂ ‘ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ’ದ ಕಾಯ್ದೆಗಳಿಗೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ.ಹಿಂದೆ ಮುಜರಾಯಿಯೇತರ ಇಲಾಖೆಗಳ ಅಧಿಕಾರಿಗಳನ್ನು ದೇವಸ್ಥಾನಗಳ ಆಡಳಿತಕ್ಕೆ ನಿಯೋಜಿಸಲಾಗುತ್ತಿತ್ತು. ಆದರೆ, ಅವರಿಗೆ ದೇವಸ್ಥಾನಗಳ ಆಗುಹೋಗುಗಳ ಬಗ್ಗೆ ಅರಿವಿಲ್ಲದ ಕಾರಣ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿತ್ತು. ಇದನ್ನು ಸರಿಪಡಿಸಲು, ಇಲಾಖೆಯ ‘ಗ್ರೂಪ್-ಎ’ ಹಿರಿಯ ಶ್ರೇಣಿಯ ಅಧಿಕಾರಿಗಳನ್ನೇ ನೇಮಕ ಮಾಡಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಿವಿಧ ವಿಧೇಯಕಗಳಿಗೆ ಒಪ್ಪಿಗೆ:ಬಯಲುಸೀಮೆ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗಳ ವ್ಯಾಪ್ತಿಯಲ್ಲಿ, ನಿರ್ದಿಷ್ಟ ಕ್ಷೇತ್ರ ಹೊಂದಿರದ ವಿಧಾನ ಪರಿಷತ್ ಸದಸ್ಯರಿಗೂ ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ-2025, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕ-2025ಕ್ಕೆ ಅಂಗೀಕಾರ ಪಡೆಯಲಾಗಿದೆ.
ಇದಲ್ಲದೆ ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2025 ಹಾಗೂ ಕರ್ನಾಟಕ ಒಳನಾಡು ನೌಕೆ ನಿಯಮಗಳು-2025 ವಿಧೇಯಕಗಳಿಗೆ ಸಂಪುಟ ಅನುಮೋದನೆ ನೀಡಿದೆ.