ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸಗಿ
ರೈತರು ಹಾಗೂ ಸಾರ್ವಜನಿಕರ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಮಹಿಳಾ ಶೌಚಾಲಯ ಸಮಸ್ಯೆ ಬಗ್ಗೆ ಕಳೆದ ವರ್ಷ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾಗಿದ್ದ ಅರ್ಜಿ ಇನ್ನೂ ಪರಿಹರಿಸದೆ ಇರುವುದಕ್ಕೆ ಪಟ್ಟಣ ಪಂಚಾಯ್ತಿ ಅಧಿಕಾರಿಯನ್ನು ಜಿಲ್ಲಾಧಿಕಾರಿ ಡಾ. ಸುಶೀಲಾ ತರಾಟೆಗೆ ತೆಗೆದುಕೊಂಡರು.ಅರ್ಜಿದಾರರೊಬ್ಬರು ಎರಡು ತಿಂಗಳ ಹಿಂದೆ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಇದುವರೆಗೂ ಪ್ರಮಾಣ ಪತ್ರ ನೀಡಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆಯೇ ಸ್ಥಳದಲ್ಲಿದ್ದ ತಹಸೀಲ್ದಾರರಿಗೆ ಯಾವುದೇ ಪ್ರಮಾಣ ಪತ್ರವಾಗಲಿ ನಿಗದಿತ ಅವಧಿಯಲ್ಲಿ ವಿತರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕುಡಿಯುವ ನೀರು, ರಸ್ತೆ, ಮನೆ ಜಾಗ, ಹೊಲ ಒತ್ತುವರಿ, ದಿವ್ಯಾಂಗರಿಗೆ ಮನೆ, ಸಮನ್ವಯ ಸಭೆ, ಅನೇಕ ವಿಷಯಗಳ ಕುರಿತು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಅರ್ಜಿದಾರರ ಸಮಕ್ಷಮದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ, ಚುರುಕು ಮುಟ್ಟಿಸಿದರು.ರಾಜವಾಳ ತಾಂಡಾ, ಗೆದ್ದಲಮರಿ, ಬೂದಿಹಾಳ, ಸಿದ್ದಪೂರ, ಕಾಮನಟಗಿ, ರಾಜನಕೋಳೂರು ಹುಣಸಗಿ ಭಾಗದಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಅಧಿಕಾರಿಗಳನ್ನು ಕರೆಯಿಸಿ ಮಾತನಾಡಿ, ಸಮಸ್ಯೆಗಳ ಪರಿಹಾರಕ್ಕೆ ಭರವಸೆ ನೀಡಿದರು.
ಗ್ರಾಮಗಳಲ್ಲಿ ಹಳೆಯ ಜೋತು ಬಿದ್ದ ವಿದ್ಯುತ್ ತಂತಿಗಳಿಂದ ಅವಘಡ ಸಂಭವಿಸಿ ಜಾನುವಾರುಗಳು ಸಾಯುತ್ತಿವೆ. ಕೆಲ ದಿನಗಳ ಹಿಂದೆ ಹುಣಸಗಿ ಪಟ್ಟಣದ ಕೆಬಲ್ ಕಡಿದು ಬಿದ್ದು, ಮಗುವಿಗೆ ವಿದ್ಯುತ್ ತಗುಲಿತ್ತು. ತಕ್ಷಣವೆ ಜೋತು ಬಿದ್ದ ಎಲ್ಲಾ ಕೇಬಲ್ ಬದಲಿಸಿ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಕಾಶಿಂ ಟೊಣ್ಣುರು ಅವರು ಮನವಿ ಮಾಡಿದರು.ಬಸ್ ನಿಲ್ದಾಣ, ಸರಕಾರಿ ಕಚೇರಿಗಳಲ್ಲಿ ದಿವ್ಯಾಂಗರಿಗೆ ಅನುಕೂಲವಾಗುವಂತೆ ಶೌಚಾಲಯ, ಕೂರುವ ಆಸನಗಳ ಅನುಕೂಲ ಮಾಡಿಕೊಡಬೇಕು. ದಿವ್ಯಾಂಗರಿಗೆ ಸರಕಾರದ ಎಲ್ಲಾ ಸವಲತ್ತುಗಳು ದೊರಕುವಂತೆ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಎಂದು ಸಂಗನಗೌಡ ಧನರೆಡ್ಡಿ ಮನವಿ ಮಾಡಿದರು.
ಸರ್ವೇ ಇಲಾಖೆ ಹಾಗೂ ವಿದ್ಯುತ್, ಕಚೇರಿಯಲ್ಲಿ ಅರ್ಜಿ ವಿಳಂಬದ ಬಹಳ ಅರ್ಜಿಗಳು ಜಿಲ್ಲಾಧಿಕಾರಿಗಳ ಕೋಪಕ್ಕೆ ಕಾರಣವಾಯಿತು.ಒಟ್ಟು 99 ಅರ್ಜಿಗಳನ್ನು ಸ್ವೀಕರಿಸಿ ಕೆಲವನ್ನು ಸ್ಥಳದಲ್ಲಿಯೇ ಪರಿಹರಿಸಿ, ಉಳಿದ ಅರ್ಜಿಗಳನ್ನು ಕಾಲಮಿತಿ ನಿಗದಿ ಪಡಿಸಲಾಗಿದೆ ಎಂದು ತಹಸೀಲ್ದಾರ್ ಬಸವಲಿಂಗಪ್ಪ ನೈಕೋಡಿ ತಿಳಿಸಿದರು.
ಜಿಲ್ಲಾ ಅರಣ್ಯ ಅಧಿಕಾರಿ ಕಾಜಲ್ ಪಾಟೀಲ್, ತಾಲೂಕು ಪಂಚಾಯ್ತಿ ಬಸವರಾಜಸ್ವಾಮಿ ಹಿರೇಮಠ ಸೇರಿದಂತೆ ಇತರರಿದ್ದರು.ಪ್ರತಿಯೊಬ್ಬ ರೈತರು ಪಹಣಿಗೆ ಆಧಾರ್ ಜೋಡಣೆ ಮಾಡಿಹುಣಸಗಿ:
2023-24ನೇ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟವಾಗಿರುವ ಕುರಿತು ಸರ್ವೇ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಸರಕಾರ ಮೊದಲನೇಯ ಅಂತದಲ್ಲಿ 9 ಕಂತುಗಳ ಮೂಲಕ 1 ಲಕ್ಷಕ್ಕೂ ಅಧಿಕ ಜನರಿಗೆ 20 ಕೋಟಿ 65 ಲಕ್ಷ ರು.ಗಳು ಈಗಾಗಲೇ ಪರಿಹಾರದ ಹಣ ಜಮಾ ಮಾಡಲಾಗಿದೆ. ಇನ್ನು 13 ಸಾವಿರದಷ್ಟು ರೈತರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹೆಸರು ಹೊಂದಾಣಿಕೆ ಇರದಿರುವುದರಿಂದ ಜಮಾ ಆಗಿರುವುದಿಲ್ಲ. ಪ್ರಸ್ತುತ 7 ಸಾವಿರ ರೈತರ ಆಧಾರ್ ಜೋಡಣೆ ಹಾಗೂ ಹೆಸರು ಹೊಂದಾಣಿಕೆ ಆಗಿರುವುದನ್ನು ಕ್ರಮ ವಹಿಸಲಾಗಿದೆ. ಅದಕ್ಕಾಗಿ ಜಿಲ್ಲೆಯ ಪ್ರತಿಯೊಬ್ಬ ರೈತರು ಪಹಣಿಗೆ ಆಧಾರ ಜೋಡಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ತಿಳಿಸಿದ್ದಾರೆ.