ಬಿಎಸ್‌ಪಿಎಲ್ ವಿರುದ್ಧದ 9 ಹೋರಾಟಗಾರರ ವಿರುದ್ಧ ಎಫ್‌ಐಆರ್‌

| Published : Jul 25 2025, 12:32 AM IST

ಬಿಎಸ್‌ಪಿಎಲ್ ವಿರುದ್ಧದ 9 ಹೋರಾಟಗಾರರ ವಿರುದ್ಧ ಎಫ್‌ಐಆರ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಸ್‌ಪಿಎಲ್ ಭದ್ರತಾ ವ್ಯವಸ್ಥಾಪಕ ಎಂ. ಮಹೇಶ ನೀಡಿದ ದೂರಿನ ಆಧಾರದಲ್ಲಿ ಹೋರಾಟಗಾರರಾದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ರೈತ ಮುಖಂಡ ಹನುಮಂತಪ್ಪ ಕಲ್ಕಕೇರಿ, ಮಂಗಳೇಶ ರಾಥೋಡ, ಮುದಕಪ್ಪ ಹೊಸಮನಿ, ಕೆ.ಬಿ. ಗೋನಾಳ, ಯಮನೂರಪ್ಪ ಪೂಜಾರ, ಮಂಜುನಾಥ ಗೊಂಡಬಾಳ, ಭೀಮೇಶ ಕಲಿಕೇರಿ ಹಾಗೂ ಎಸ್.ಎ. ಗಫಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಪ್ಪಳ:

ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿರುವ ನಿಗದಿತ ಭೂಮಿಯ ಕಾಂಪೌಂಡ್ ಒಳಗೆ ಜಾನುವಾರು ನುಗ್ಗಿಸಿ ಕಾನೂನು ಬಾಹೀರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ ಕಂಪನಿಯ ಭದ್ರತಾ ವ್ಯವಸ್ಥಾಪಕ ಕೊಪ್ಪಳ ಬಚಾವೋ ಆಂದೋಲನ ಸಮಿತಿ 9 ಹೋರಾಟಗಾರರ ವಿರುದ್ಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಬಿಎಸ್‌ಪಿಎಲ್ ಭದ್ರತಾ ವ್ಯವಸ್ಥಾಪಕ ಎಂ. ಮಹೇಶ ನೀಡಿದ ದೂರಿನ ಆಧಾರದಲ್ಲಿ ಹೋರಾಟಗಾರರಾದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ರೈತ ಮುಖಂಡ ಹನುಮಂತಪ್ಪ ಕಲ್ಕಕೇರಿ, ಮಂಗಳೇಶ ರಾಥೋಡ, ಮುದಕಪ್ಪ ಹೊಸಮನಿ, ಕೆ.ಬಿ. ಗೋನಾಳ, ಯಮನೂರಪ್ಪ ಪೂಜಾರ, ಮಂಜುನಾಥ ಗೊಂಡಬಾಳ, ಭೀಮೇಶ ಕಲಿಕೇರಿ ಹಾಗೂ ಎಸ್.ಎ. ಗಫಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಜು. 23ರಂದು ಮಧ್ಯಾಹ್ನ 12 ಗಂಟೆಗೆ ಬಿಎಸ್‌ಪಿಎಲ್ ಕಾರ್ಖಾನೆ ಕಾಂಪೌಂಡ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಜಾನುವಾರುಗಳೊಂದಿಗೆ ಬಂದು, ಒತ್ತಾಯದಿಂದ ನಮ್ಮನ್ನು ತಳ್ಳಿ ಕಾಂಪೌಂಡ್ ಒಳಗೆ ಜಾನುವಾರುಗಳನ್ನು ಕಾನೂನು ಬಾಹೀರವಾಗಿ ನುಗ್ಗಿಸಿದ್ದಾರೆ. ಬಲವಂತವಾಗಿ ಒಳಗೆ ಪ್ರವೇಶ ಮಾಡಿದ್ದು ಅಲ್ಲದೆ, ನನಗೆ ಮತ್ತು ನಮ್ಮ ಸಿಬ್ಬಂದಿಯನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ, ಇವರ ವಿರುದ್ಧ ಕಲಂ 329-(3), ಸಂಹಿತೆ 190 ಭಾರತೀಯ ದಂಡಸಂಹಿತೆ 2023ರ ಅಡಿಯಲ್ಲಿ ಕ್ರಮವಹಿಸುವಂತೆ ಕೋರಿದ್ದಾರೆ.

ಆಗಿದ್ದೇನು?:

ಕೊಪ್ಪಳ ಬಳಿ ತಲೆ ಎತ್ತಲಿರುವ ಬಿಎಸ್‌ಪಿಎಲ್ ಕಾರ್ಖಾನೆಗಾಗಿ ಸ್ವಾಧೀನ ಮಾಡಿಕೊಂಡಿರುವ ಭೂಮಿಯ ಜತೆಗೆ ಬಸಾಪುರ ಕೆರೆಯನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೆರೆಯನ್ನು ಸರ್ಕಾರ ಗುತ್ತಿಗೆ ನೀಡುವ ವೇಳೆಯಲ್ಲಿ ಜನ, ಜಾನುವಾರುಗಳಿಗೆ ಕೆರೆಯನ್ನು ಮುಕ್ತವಾಗಿಡುವಂತೆ ಷರತ್ತು ವಿಧಿಸಿದೆ.

ಆದರೆ, ಈಗ ಕೆರೆಯನ್ನು ಒಳಗೆ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದರಿಂದ ಜನ, ಜಾನುವಾರುಗಳಿಗಾಗಿ ಬಳಕೆಗೆ ಅವಕಾಶವಿಲ್ಲದಂತೆ ಆಗಿದೆ. ಸುಪ್ರೀಂಕೋರ್ಟ್‌ ಆದೇಶದಲ್ಲಿಯೂ ಸಾರ್ವಜನಿಕ ಮುಕ್ತವಾಗಿರಬೇಕು ಎಂದು ಹೇಳಿದೆ. ಹೀಗಾಗಿ, ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ಅವಕಾಶ ಮಾಡಿಕೊಡಬೇಕು ಎಂದು ಬುಧವಾರ ಕುರಿ, ಆಕಳು ಸೇರಿದಂತೆ ಸಾವಿರಕ್ಕೂ ಅಧಿಕ ಜಾನುವಾರ ನುಗ್ಗಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಗುರುವಾರ ಹೋರಾಟಗಾರರ ವಿರುದ್ಧ ಬಿಎಸ್‌ಪಿಎಲ್ ಕಂಪನಿ ಪ್ರಕರಣ ದಾಖಲಿಸಿದೆ.