ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗಲೇ ಹಾಲಿ ಅಧ್ಯಕ್ಷ ಹಾಗೂ ಪುನರಾಯ್ಕೆ ಬಯಸಿ ಸ್ಪರ್ಧಿಸಿರುವ ಜಿ.ಸುರೇಶ್‌ಬಾಬು ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.ಮಾಲೂರು ತಾಲೂಕು ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕಿ ನಿವೇದಿತಾ ಅವರು ನೀಡಿರುವ ದೂರಿನ ಆಧಾರದ ಮೇಲೆ ಕೋಲಾರದ ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಸೂಪರ್‌ವೈಸರ್ ಸುರೇಶ್‌ಬಾಬು ಮತ್ತು ಪ್ರಸ್ತುತ ಕೋಲಾರದಲ್ಲಿ ಸರ್ವೆಯರ್ ಆಗಿರುವ ಹಿಂದೆ ಮಾಲೂರು ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸರ್ವೇಯರ್ ಆಗಿದ್ದ ಬಿ.ನಾಗರಾಜ್ ವಿರುದ್ಧ ದೂರು ದಾಖಲಿಸಲಾಗಿದೆ.
ಬಾಬು ಎರಡನೇ ಆರೋಪಿಪ್ರಕರಣದಲ್ಲಿ ನಾಗರಾಜ್‌ರನ್ನು ಮೊದಲ ಮತ್ತು ಸುರೇಶ್‌ಬಾಬುರನ್ನು ಎರಡನೇ ಆರೋಪಿ ಎಂದು ಹೆಸರಿಸಲಾಗಿದೆ. ಜತೆಗೆ ಇತರರು ಎಂದು ಸಹ ಆರೋಪಿಗಳ ಪಟ್ಟಿಯಲ್ಲಿ ನಮೂದಿಸಲಾಗಿದೆ. ೧೧-೭-೨೦೨೪ರಿಂದ ೨೧-೧೧-೨೦೨೪ರವರೆಗೆ ಮಾಲೂರು ಭೂದಾಖಲೆಗಳ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ನ.೩೦ರಂದು ಮಾಲೂರು ಠಾಣೆಗೆ ನೀಡಿರುವ ದೂರಿನಲ್ಲಿ ನಿವೇದಿತಾ ಆರೋಪಿಸಿದ್ದಾರೆ.
ಇವರಿಬ್ಬರ ವಿರುದ್ಧ ಸರ್ಕಾರಿ ದಾಖಲೆಗಳ ತಿದ್ದುವಿಕೆ, ಅಪಹರಣ, ಅಧಿಕಾರ ದುರುಪಯೋಗದ ಆರೋಪ ಹೊರಿಸಲಾಗಿದೆ. ಮಾಲೂರು ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ದಾಖಲೆಗಳನ್ನು ಅಪಹರಿಸಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಅಧ್ಯಕ್ಷ ಸ್ಥಾನಕ್ಕೆ 2ನೇ ಬಾರಿ ಸ್ಪರ್ಧೆ
ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸುರೇಶ್‌ಬಾಬು ಎರಡನೇ ಬಾರಿಗೆ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಡಿ.೪ರಂದು ಮತದಾನ ನಡೆಯಲಿದೆ. ಸುರೇಶ್‌ಬಾಬು ವಿರುದ್ಧ ಅವರ ಮಾಜಿ ಪರಮಾಪ್ತ ಜಿಲ್ಲಾಧಿಕಾರಿ ಕಚೇರಿಯ ಉದ್ಯೋಗಿ ಅಜಯ್ ಸ್ಪರ್ಧಿಸಿದ್ದಾರೆ.ಈ ನಡುವೆ ಶುಕ್ರವಾರವಷ್ಟೇ ಸುರೇಶ್‌ಬಾಬು ವಿರುದ್ಧ ಕೆಲವು ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವು. ಶನಿವಾರ ಸಂಜೆ ಸಹಾಯಕ ನಿರ್ದೇಶಕರಿಂದ ಮಾಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.