ಸಾರಾಂಶ
ನಾಗಮಂಗಲ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಎಫ್‌ಐಆರ್ ಹಾಕಿರುವುದನ್ನು ನೋಡಿದರೆ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎಂದು ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರ ಮೇಲೆ ಈ ರೀತಿ ಎಫ್‌ಐಆರ್ ಹಾಕುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ಯಾವ ವ್ಯವಸ್ಥೆ ತರಬೇಕೆಂದುಕೊಂಡಿದ್ದಾರೋ ಗೊತ್ತಿಲ್ಲ. ಇದನ್ನು ಸರ್ಕಾರ ಅಂತ ಕರಿಬೇಕಾ ಎಂದು ಕಿಡಿಕಾರಿದರು.
ಯಾವುದೇ ಅಹಿತಕರ ಘಟನೆ ಅಥವಾ ಗಲಭೆಯ ಮುನ್ಸೂಚನೆಯ ಮಾಹಿತಿ ನೀಡಲು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಲು ಒಬ್ಬ ಪೊಲೀಸ್ ಪೇದೆ ನಿಯೋಜಿಸಿದ್ದಾರಂತೆ. ಹಾಗಿದ್ದರೆ ಗುಪ್ತಚರ ಇಲಾಖೆಯವರು ಸ್ಥಳದಲ್ಲಿದ್ದರೂ ಸಹ ಅಂದು ರಾತ್ರಿ ಹೇಗೆ ಬೆಂಕಿ ಹಚ್ಚಿದ್ರು. ಇದು ಯಾರ ವೈಫಲ್ಯ ಎಂದು ಪ್ರಶ್ನೆ ಮಾಡಿದರು.
ಗಲಭೆ ಸೃಷ್ಟಿಸಲು ದೊಂಬಿ ಎಬ್ಬಿಸಿ ಸುಳ್ಳು ಸುದ್ದಿಯ ಪೋಸ್ಟ್ ಹಾಕಿದ್ದಾರೆಂದು ಆರೋಪಿಸಿ ಶೋಭಾ ಕರಂದ್ಲಾಜೆ ಮತ್ತು ಆರ್.ಅಶೋಕ್ ವಿರುದ್ಧ ಹಾಕಿರುವ ಎಫ್‌ಐಆರ್ ನೋಡಿದರೆ ನಗುಬರುತ್ತೆ. ಹಾಗಿದ್ದರೆ ನೀವು ಯಾರ ಬಗ್ಗೆಯೂ ಮಾತಾಡುವಂತಿಲ್ಲ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ ಅಳಸಲು ಕಥೆ:
ಗಂಗೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಡಿಕೆ ವಿರುದ್ಧ ಆರೋಪಿಸಿ ದಾಖಲೆ ಬಿಡುಗಡೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು ಅವರು, ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಅಳಸಲು ಕಥೆ. ಅದರಲ್ಲಿ ವಿಷಯವೇ ಇಲ್ಲ. ಅದು ನನಗೆ ಸಂಬಂಧ ಇಲ್ಲದ ವಿಚಾರ ಎಂದರು.
ಸಚಿವ ಕೃಷ್ಣಭೈರೇಗೌಡ ಫಾರಿನ್‌ನಲ್ಲಿ ಓದಿಕೊಂಡು ಬಂದಿದ್ದಾರೆ. ನಾವು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿಕೊಂಡು ಬಂದಿರೋರು. ನಾನೇನು ಕದ್ದು ಓಡಿಹೋಗಲ್ಲ. ಇದರ ಬಗ್ಗೆ ಶುಕ್ರವಾರ ಮೈಸೂರಿನಲ್ಲಿ ಡೀಟೈಲ್ ಆಗಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.