ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೆ ನಿಂದಿಸುವ ಹಾಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪ ಸಂಬಂಧ ನಟ ದರ್ಶನ್ ಅವರ ಅಭಿಮಾನಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಅಶ್ಲೀಲ ಸಂದೇಶ ಕಳುಹಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ರಮ್ಯಾ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆಗೆ ಸೂಚಿಸಿದರು. ಅಂತೆಯೇ ದೂರಿನಲ್ಲಿ ಉಲ್ಲೇಖವಾಗಿದ್ದ 43 ಇನ್‌ಸ್ಟಾಗ್ರಾಂ ಖಾತೆಗಳ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
-ಬಾಕ್ಸ್-ಇನ್‌ಸ್ಟಾಗ್ರಾಂ, ಎಕ್ಸ್‌ಗೆ ಪೊಲೀಸರ ಪತ್ರ
ಅಶ್ಲೀಲ ಸಂದೇಶ ಕಳುಹಿಸಿದ ಖಾತೆಗಳ ವಿವರ ನೀಡುವಂತೆ ಇನ್‌ಸ್ಟಾಗ್ರಾಂ ಹಾಗೂ ಎಕ್ಸ್ ಕಂಪನಿಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ದೂರಿನಲ್ಲಿ 43 ಖಾತೆಗಳನ್ನು ರಮ್ಯಾ ಉಲ್ಲೇಖಿಸಿದ್ದಾರೆ. ಹೀಗಾಗಿ ಆ ಖಾತೆಗಳ ಮಾಹಿತಿ ನೀಡುವಂತೆ ಆ ಎರಡು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಪತ್ರ ಬರೆಯಲಾಗಿದೆ. ವಿವರ ನೀಡಿದ ಬಳಿಕ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಸಂಬಂಧ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ರಮ್ಯಾ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಕುರಿತು ಸಿಸಿಬಿ ಡಿಸಿಪಿ ಉಸ್ತುವಾರಿಯಲ್ಲಿ ತನಿಖೆ ನಡೆಯಲಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರ ಜಾಮೀನು ಅರ್ಜಿ ಸಂಬಂಧ ನ್ಯಾಯಾಲಯದ ಕಲಾಪ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ನಲ್ಲಿ ರಮ್ಯಾ ಪೋಸ್ಟ್ ಮಾಡಿದ್ದರು. ಇದರಿಂದ ಕೆರಳಿದ ದರ್ಶನ್ ಅಭಿಮಾನಿಗಳು, ಇನ್‌ಸ್ಟಾಗ್ರಾಂ ಹಾಗೂ ಎಕ್ಸ್ ತಾಣಗಳಲ್ಲಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಹಾಗೂ ನಿಂದನೆ ಮಾಡಿದ್ದ ಆರೋಪ ಕೇಳಿ ಬಂದಿತ್ತು.ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ ನಟ ಪ್ರಥಮ್:ಬಹಳ ದಿನಗಳಿಂದ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ಮಧ್ಯೆ ನಡೆಯುತ್ತಿದ್ದ ತಿಕ್ಕಾಟ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದರ್ಶನ್ ಅಭಿಮಾನಿಗಳು ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ, ಹಲ್ಲೆಗೆ ಯತ್ನಿಸಿದ್ದಾರೆಂದು ಆರೋಪಿಸಿ ಪ್ರಥಮ್ ಅವರು ಬೆಂಗಳೂರು ಉತ್ತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.ಲಿಖಿತ ದೂರಿನಲ್ಲಿ, ‘ದರ್ಶನ್ ಅಭಿಮಾನಿಗಳು ಹಲ್ಲೆಗೆ ಯತ್ನಿಸಿದ್ದರು’ ಎಂದು ತಿಳಿಸಿದ್ದಾರೆ. ದರ್ಶನ್ ಅಭಿಮಾನಿಗಳಿಂದ ತೇಜೋವಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ತಮಗೆ ನ್ಯಾಯ ಸಿಗುವವರೆಗೂ ವಾಣಿಜ್ಯ ಮಂಡಳಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರು ತಿಳಿಸಿದ್ದರು.‘ದರ್ಶನ್ ಅವರು ಬಂದು ‘ಇನ್ನು ಮುಂದೆ ನಮ್ಮ ಅಭಿಮಾನಿಗಳು ಪ್ರಥಮ್ ತಂಟೆಗೆ ಹೋಗಲ್ಲ’ ಎಂದು ಹೇಳಬೇಕು. ಅಲ್ಲಿಯವರೆಗೂ ನಾನು ಇಂದಿನಿಂದ ಆಮರಣಾಂತ ಉಪವಾಸ ಮಾಡುತ್ತೇನೆ. ಒಂದು ಹನಿ ನೀರು ಕುಡಿಯಲ್ಲ. ನಾನು ಸತ್ತರೂ ಪರವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ನಿರಶನಕ್ಕೆ ಅವಕಾಶ ಇಲ್ಲ:
ಅದೇ ಪ್ರಕಾರ ಸಂಜೆ ವಾಣಿಜ್ಯ ಮಂಡಳಿಗೆ ಬಂದಿದ್ದ ಪ್ರಥಮ್ ಅವರಿಗೆ ಉಪವಾಸ ಸತ್ಯಾಗ್ರಹ ಮಾಡಲು ಅವಕಾಶ ನಿರಾಕರಿಸಲಾಗಿದೆ.‘ರಮ್ಯಾ, ಸುದೀಪ್, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಗಣೇಶ್, ಯಶ್ ಎಲ್ಲರಿಗೂ ಟ್ರೋಲ್ ಮಾಡುತ್ತಾರೆ. ಈ ಟ್ರೋಲ್ ಪೇಜ್‌ಗಳಲ್ಲಿ ಬರುವ ಅಷ್ಟೂ ಟ್ರೋಲ್ ನಿಲ್ಲಬೇಕು. ದರ್ಶನ್ ಅವರ 150 ಫ್ಯಾನ್ ಪೇಜ್‌ಗಳನ್ನು ಡಿಲೀಟ್ ಮಾಡಬೇಕು. ಈ ವಿಚಾರ ಇತ್ಯರ್ಥವಾಗುವವರಗೆ ನಾನು ಉಪವಾಸ ಮಾಡುತ್ತೇನೆ. ಈ ವಿಚಾರದಲ್ಲಿ ದರ್ಶನ್ ಅವರು ಎಲ್ಲವನ್ನೂ ನೋಡಿಕೊಂಡು ಮಜಾ ತೆಗೆದುಕೊಳ್ಳಬಾರದು. ಅವರು ಮಧ್ಯಪ್ರವೇಶಿಸಬೇಕು. ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು’ ಎಂದು ಪ್ರಥಮ್ ಹೇಳಿದ್ದರು.
ಈ ಕುರಿತು ‘ಕನ್ನಡಪ್ರಭ’ ಜತೆಗೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಅವರು, ‘ನನಗೆ ಅನ್ಯಾಯ ಆಗಿದೆ, ನನಗೆ ನ್ಯಾಯಬೇಕು, ನಾನು ವಾಣಿಜ್ಯ ಮಂಡಳಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಕೂರುತ್ತೇನೆ ಎಂದು ಪ್ರಥಮ್ ಸಂಜೆ ಬಂದಿದ್ದರು. ಆದರೆ, ಪೊಲೀಸ್ ಅನುಮತಿ ಸೇರಿದಂತೆ ಕೆಲ ಕಾನೂನು ನಿಯಮಗಳ ಕಾರಣಕ್ಕೆ ಹೀಗೆ ಇದ್ದಕ್ಕಿಂತೆ ಸತ್ಯಾಗ್ರಹ ಕೂರಲು ಆಗಲ್ಲ. ನಾಳೆ ಬನ್ನಿ ಮಾತನಾಡೋಣ ಎಂದು ಹೇಳಿ ಕಳುಹಿಸಿದ್ದೇವೆ’ ಎಂದು ಹೇಳಿದ್ದಾರೆ.