ಸಾರಾಂಶ
- ಕಡಿಮೆ ದುಡ್ಡಿಗೆ ಬಡವರ ಅಕ್ಕಿ ಖರೀದಿ ದಂಧೆಗೆ ಬ್ರೇಕ್ ಹಾಕಲು ಡಿಸಿ ಗಂಗಾಧರ ಸ್ವಾಮಿ ಸೂಚನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜೊತೆಗೆ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಹಿನ್ನೆಲೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಧ್ಯವರ್ತಿಗಳು ಹಣದ ಆಮಿಷವೊಡ್ಡಿ ಬಡವರಿಂದ ಅಕ್ಕಿ ಖರೀದಿಸುತ್ತಿದ್ದಾರೆ. ಮನೆ ಮನೆಗೆ ಹೋಗಿ ಕಡಿಮೆ ದುಡ್ಡಿಗೆ ಅನ್ನಭಾಗ್ಯದ ಅಕ್ಕಿ ಸಂಗ್ರಹಿಸುವ ದಂಧೆಕೋರರು, ಅದನ್ನು ರಾಜ್ಯದ ಗಡಿಯಾಚೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ನ್ಯಾಮತಿ ತಾಲೂಕಿನಲ್ಲಿ ಅತಿ ಹೆಚ್ಚಾಗಿ ನ್ಯಾಯಬೆಲೆ ಅಂಗಡಿಗಳಿಂದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅಲ್ಲಿಂದ ವಿದೇಶಗಳಿಗೂ ರವಾನೆಯಾಗುತ್ತಿದೆ ಎಂದು ತಿಳಿಸಿದರು.ಗಂಜಿ ಮಾಡಲು ಅನ್ನಭಾಗ್ಯದ ಅಕ್ಕಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಕಾಳಸಂತೆ ದಂಧೆಗೆ ಕಡಿವಾಣ ಹಾಕಬೇಕಿದೆ. ರಾಜ್ಯದಲ್ಲಿ ಬಡವರಿಗೆ ಅನ್ನಭಾಗ್ಯದಡಿ ಉಚಿತವಾಗಿ ನೀಡುತ್ತಿರುವ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಹೊರ ಜಿಲ್ಲೆಗಳಿಗೆ ಸಾಗಿಸುವ ಮೂಲಕ ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯದ ಅಕ್ಕಿ ವ್ಯವಸ್ಥಿತವಾಗಿ ರೈಸ್ ಮಿಲ್‌ಗಳ ಗೋದಾಮುಗಳಿಗೆ ಸೇರುತ್ತಿದೆ ಎಂದು ಕಿಡಿಕಾರಿದರು.
ಅನ್ನಭಾಗ್ಯ ಅಕ್ಕಿ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು. ಅನ್ನಭಾಗ್ಯದ ಸ್ಟಾಕ್ ಬಂದ ತಕ್ಷಣ ಅದನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ವೀಡಿಯೋ ಅಳವಡಿಸಬೇಕು. ಸಾರ್ವಜನಿಕರು ನ್ಯಾಯಬೆಲೆ ಅಂಗಡಿ ಅಥವಾ ಇನ್ನಾವುದೇ ಪ್ರದೇಶಗಳಲ್ಲಿ ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಕಂಡುಬಂದರೆ, ತಕ್ಷಣೇ 112ಗೆ ಕರೆ ಮಾಡಿ ತಿಳಿಸಬೇಕು. ಅಕ್ರಮವಾಗಿ ಆಟೋ, ಗೂಡ್ಸ್ ವಾಹನಗಳಲ್ಲಿ ಅಕ್ಕಿ ಖರೀದಿಸುತ್ತಿದ್ದು, ಅಂತಹ ವಾಹನಗಳಿಗೆ ದಂಡ ವಿಧಿಸಬೇಕು ಎಂದು ಆದೇಶಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಅಪರ ಎಸ್‌ಪಿ ಪರಮೇಶ್ವರ ಹೆಗಡೆ, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ, ತಹಸೀಲ್ದಾರ್ ಅಶ್ವತ್ಥ್, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ, ಡಿಎಆರ್ ಡಿವೈಎಸ್ಪಿ ಪಿ.ಬಿ.ಪ್ರಕಾಶ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಇತರರು ಇದ್ದರು.
- - --18ಕೆಡಿವಿಜಿ6.ಜೆಪಿಜಿ:
ದಾವಣಗೆರೆ ಡಿಸಿ ಕಚೇರಿಯಲ್ಲಿ ಶನಿವಾರ ಅನ್ನಭಾಗ್ಯದ ಅಕ್ಕಿ ಕಾಳಸಂತೆ ಪಾಲಾಗುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಯಲ್ಲಿ ಪೊಲೀಸ್, ಕಂದಾಯ, ಆಹಾರ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.