ಬಾಲ್ಯ ವಿವಾಹ ತಡೆಗೆ ಎಫ್‌ಐಆರ್

| Published : Apr 28 2025, 12:45 AM IST

ಸಾರಾಂಶ

ಬಾಲ್ಯವಿವಾಹ ತಡೆಗೆ ಸಂಬಂದಿಸಿದಂತೆ ತಹಸೀಲ್ದಾರ ಕಚೇರಿಯಲ್ಲಿ ತಾಲೂಕು ಸಮನ್ವಯ ಸಮಿತಿ ಸಭೆ ನಡೆಯಿತು.

ತಾಲಾಕು ಮಟ್ಟದ ಅಧಿಕಾರಿಗಳಿಗೆ ತಹಸೀಲ್ದಾರ್ ತಾಕೀತುಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಾಲ್ಯ ವಿವಾಹ ಪ್ರಕರಣಗಳು ಎಲ್ಲಿಯಾದರೂ ಕಂಡು ಬಂದಲ್ಲಿ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ತಹಸೀಲ್ದಾರ್ ಗೋವಿಂದರಾಜ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬಾಲ್ಯವಿವಾಹ ನಿಷೇದ ತಡೆ ಕಾಯ್ದೆ, ಮಕ್ಕಳು ಮತ್ತು ಮಹಿಳೆಯರ ಸಾಗಾಟ ಹಾಗೂ ಮಾರಾಟ ತಡೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕುರಿತು ತಾಲೂಕು ಕಚೇರಿಯಲ್ಲಿ ನಡೆದ ತಾಲೂಕು ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಷಯ ತೃತೀಯ ಬಸವ ಜಯಂತಿಯಂದು ಒಳ್ಳೆಯ ದಿನವಿದೆ ಎಂಬ ನೆಪದಲ್ಲಿ ಪೋಷಕರು ಅಪ್ರಾಪ್ತ ಬಾಲಕಿಯರ ಮದುವೆ ಮಾಡುತ್ತಿರುತ್ತಾರೆ. ಅಂತಹ ಕಡೆ ಹೆಚ್ಚಿನ ನಿಗಾ ವಹಿಸಿ ಬಾಲ್ಯ ವಿವಾಹ ತಡೆಗಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಗ್ರಾಪಂ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳಿವೆ. ನಿಮ್ಮ ನಿಮ್ಮ ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಿ ಬಾಲ್ಯ ವಿವಾಹಗಳಾಗುವುದನ್ನು ತಡೆಗಟ್ಟಬೇಕು. ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷಗಳಾಗಿರಬೇಕು. ಆಗ ಮಾತ್ರ ವಿವಾಹ ಮಾಡಿಕೊಳ್ಳಲು ಅರ್ಹರು. ಈ ನಿಯಮವನ್ನು ಉಲ್ಲಂಘಿಸಿ ಮಕ್ಕಳ ವಿವಾಹವಾದರೆ ಪೋಷಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಡಿಯಲ್ಲಿ ಅವಕಾಶವಿದೆ ಎನ್ನುವುದನ್ನು ಗ್ರಾಮೀಣ ಮಟ್ಟದಲ್ಲಿ ಜನತೆಗೆ ಮನವರಿಕೆ ಮಾಡಿಕೊಟ್ಟಾಗ ಮಾತ್ರ ಬಾಲ್ಯ ವಿವಾಹ ನಿಯಂತ್ರಣಕ್ಕೆ ಬರಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಭರಮಸಾಗರ ಸಿಡಿಪಿಒ ಸುಧಾ, ಚಿತ್ರದುರ್ಗ ಸಿಡಿಪಿಒ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ನಗರಸಭೆ ಪೌರಾಯುಕ್ತೆ ರೇಣುಕಾ, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ.ಶಂಕರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.