ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮುಲಾಜಿಲ್ಲದೆ ಎಫ್‌ಐಆರ್

| Published : Feb 05 2025, 12:30 AM IST

ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮುಲಾಜಿಲ್ಲದೆ ಎಫ್‌ಐಆರ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಬಪೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಖಡಕ್ ಸೂಚನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮುಲಾಜಿಲ್ಲದೇ ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಕುರಿತು ಜರುಗಿದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದ್ದು, ಇವುಗಳನ್ನು ತಡೆಯಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮ ಸಹಾಯಕರು, ನೀರುಗಂಟಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜಾಲ ಬಳಸಿ ಬಾಲ್ಯ ವಿವಾಹಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಪ್ರತಿ ಗ್ರಾಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚಿಸಿ ತಪ್ಪದೆ ಸಭೆಗಳನ್ನು ನಡೆಸಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ಕಳೆದ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಾಲ್ಯ ವಿವಾಹ ಕುರಿತು 34 ದೂರು ಕೇಳಿ ಬಂದಿದ್ದವು. ಇವುಗಳಲ್ಲಿ 22 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 12 ಪ್ರಕರಣಗಳಲ್ಲಿ ಬಾಲ್ಯ ವಿವಾಹ ನಡೆದಿದ್ದು ಪೊಲೀಸ್ ದೂರು ನೀಡಿ ಎಫ್ಐಆರ್ ದಾಖಲಿಸಲಾಗಿದೆ. ಜಿಲ್ಲಾ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ 33, ಬಾಲಕಿಯರ ಬಾಲಮಂದಿರದಲ್ಲಿ 37 ಹಾಗೂ ಸರ್ಕಾರಿ ವೀಕ್ಷಣಾಲಯದಲ್ಲಿ 07 ಮಕ್ಕಳು ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸಭೆಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯ ಅಂಗವಾಡಿ ಕೇಂದ್ರಗಳಲ್ಲಿ ತಿಂಗಳ ಒಳಗಾಗಿ ಶೌಚಾಲಯ, ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಿಡಿಪಿಓಗಳು ವರದಿ ನೀಡಬೇಕು. ಜಲಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ಭಾಗದ ಎಲ್ಲ ಅಂಗನವಾಡಿಗಳಿಗೆ ಕುಡಿಯುವ ನೀರಿನ ಸಂಕರ್ಪವನ್ನು ಕಲ್ಪಿಸಲಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 38 ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಸಂಪರ್ಕ ಇಲ್ಲ ಎಂದರೆ ಹೇಗೆ? ಕುಡಿಯುವ ನೀರಿನ ಸಂಪರ್ಕ ಇಲ್ಲದ ಅಂಗನವಾಡಿಗಳ ವಿವರವನ್ನು ಜಿಲ್ಲಾ ಪಂಚಾಯಿತಿ ಸಿಇಓ, ತಾಪಂ ಇಓ ಹಾಗೂ ಪಿಡಿಓಗಳ ಗಮನಕ್ಕೆ ತಂದು ಕೂಡಲೇ ನೀರಿನ ಸಂಪರ್ಕ ಕಲ್ಪಿಸಬೇಕು. ಶೌಚಾಲಯಗಳು ಇಲ್ಲದ ಅಂಗನವಾಡಿ ಕೇಂದ್ರಗಳಲ್ಲಿ ಕೂಡಲೇ ಶೌಚಾಲಯಗಳನ್ನು ನಿರ್ಮಿಸಬೇಕು. ವಿದ್ಯುತ್ ಸಂಪರ್ಕ ಇಲ್ಲದ 124 ಅಂಗನವಾಡಿ ಕೇಂದ್ರಗಳಿಗೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್‍ಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 144 ತೀವ್ರ ಕಡಿಮೆ ತೂಕದ ಮಕ್ಕಳು ಪತ್ತೆಯಾಗಿವೆ. ಇದುವರೆಗೂ 176 ಮಕ್ಕಳಿಗೆ ಎನ್ಆರ್ ಸಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅನಿಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಔಷದೋಪಚಾರಗಳನ್ನು ನೀಡಲಾಗುತ್ತಿದೆ. ವೀಪರೀತ ಕಡಿಮೆ ತೂಕದ ಮಕ್ಕಳು ಎನ್ಆರ್ ಸಿ ಕೇಂದ್ರಗಳಿಗೆ ದಾಖಲಾದರೆ 15 ದಿನ ಪ್ರೋಟಿನ್‍ಯುಕ್ತ ಆಹಾರ ನೀಡಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿ.ಪಂ. ಸಿಪಿಓ ಗಾಯತ್ರಿ, ಡಿಎಚ್‍ಓ ಡಾ.ರೇಣುಪ್ರಸಾದ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶೀಲಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.