ಶಿವಗಂಗೆ ಬೆಟ್ಟದಲ್ಲಿ ಬೆಂಕಿ ಅವಘಡ

| Published : Feb 19 2024, 01:33 AM IST

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ಶನಿವಾರ ರಾತ್ರಿಯಿಂದ ಕಾಡ್ಗಿಚ್ಚು ವ್ಯಾಪಿಸಿದೆ. ಕಾಡ್ಗಿಚ್ಚಿನಿಂದ ಹತ್ತಾರು ಎಕರೆಯಷ್ಟು ಬೆಟ್ಟದ ಅರಣ್ಯ ಪ್ರದೇಶ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ದಾಬಸ್‌ಪೇಟೆ: ಸೋಂಪುರ ಹೋಬಳಿ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ಶನಿವಾರ ರಾತ್ರಿಯಿಂದ ಕಾಡ್ಗಿಚ್ಚು ವ್ಯಾಪಿಸಿದೆ. ಕಾಡ್ಗಿಚ್ಚಿನಿಂದ ಹತ್ತಾರು ಎಕರೆಯಷ್ಟು ಬೆಟ್ಟದ ಅರಣ್ಯ ಪ್ರದೇಶ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಟ್ಟದ ಸುತ್ತಮುತ್ತ, ಒಳಕಲ್ಲು ತೀರ್ಥದವರೆಗೂ ಸಂಪೂರ್ಣ ಬೆಂಕಿ ಆವರಿಸಿದ್ದು ಆತಂಕ ಸೃಷ್ಟಿಯಾಗಿದೆ.

ಫೆ.17ರ ರಾತ್ರಿ ಶಿವಗಂಗೆ-ಮುದ್ದಿರೇಶ್ವರ ಬೆಟ್ಟಕ್ಕೆ ಹಾದು ಹೋಗುವ ಕಂಬಾಳು ತಪ್ಪಲಿನ ಬೆಟ್ಟದ ಮಧ್ಯಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದ ಶಿವಗಂಗೆ, ಕಂಬಾಳು ಗ್ರಾಮಸ್ಥರು, ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರಾದರೂ ಸಿಬ್ಬಂದಿಯ ಪ್ರಯತ್ನ ಫಲಪ್ರದವಾಗಿಲ್ಲ. ಆದರೂ ಬೆಂಕಿ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನ ಮುಮದುವರಿಸಿದ್ದಾರೆ.

ಪ್ರತಿ ವರ್ಷವೂ ಬೇಸಿಗೆಯಲ್ಲಿ ಇಂತಹ ಅವಘಡಗಳು ಮರುಕಳಿಸುತ್ತಲೇ ಇದೆ. ಈ ಬೆಂಕಿಯಿಂದ ಸಾವಿರಾರು ಮರಗಳು, ಕಾಡು ಪ್ರಾಣಿಗಳು ಸಹ ಬೆಂಕಿಗೆ ಆಹುತಿಯಾಗುತ್ತಿದೆ. ಅರಣ್ಯ ಇಲಾಖೆ ಎಷ್ಟೇ ನಿಗಾ ವಹಿಸಿದರೂ, ಯಾರೋ ಕಿಡಿಗೇಡಿಗಳು ಅಥವಾ ಆಕಸ್ಮಿಕ ಬೆಂಕಿಗೂ ಇಂತಹ ಕಾಡ್ಗಿಚ್ಚು ಹಬ್ಬುವ ಸಂಭವಗಳಿವೆ.