ಬೆಂಕಿ ಅವಘಡದಿಂದ ನಗರದ ರಾಯಚೂರು ರಸ್ತೆಯಲ್ಲಿರುವ ಆರು ಅಂಗಡಿಗಳು ಭಸ್ಮವಾಗಿ, ಕೋಟ್ಯಂತರ ರೂಪಾಯಿ ಹಾನಿಯಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಸಿಂಧನೂರು
ಬೆಂಕಿ ಅವಘಡದಿಂದ ನಗರದ ರಾಯಚೂರು ರಸ್ತೆಯಲ್ಲಿರುವ ಆರು ಅಂಗಡಿಗಳು ಭಸ್ಮವಾಗಿ, ಕೋಟ್ಯಂತರ ರೂಪಾಯಿ ಹಾನಿಯಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.ರಾತ್ರಿ ಸುಮಾರು 12.15ಕ್ಕೆ ಅನುರಾಗ್ ಫ್ಯಾನ್ಸಿ ಸ್ಟೋರ್‌ನ ದೆಹಲಿ ಬಜಾರ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ನಂತರ ಅದರ ಪಕ್ಕದಲ್ಲಿರುವ ಮಹ್ಮದ್ ಸುಲೇಮಾನ್ ಬಟ್ಟೆ ಅಂಗಡಿ, ಫಯಾಜ್ ಬಟ್ಟೆ ಅಂಗಡಿ, ಕಾಳಪ್ಪರ ಹಗ್ಗದ ಅಂಗಡಿ, ರಬ್ಬಾನಿಯ ಹೊಲಕ್ಕೆ ಎಣ್ಣೆ ಹೊಡೆಯುವ ಮಿಷನ್ಗಳ ರಿಪೇರಿ ಅಂಗಡಿ, ಅಜಮೀರ್‌ರ ಸಿತಾರ್ ಚಿಕನ್ ಸೆಂಟರ್ ಅಂಗಡಿಗಳಿಗೆ ಬೆಂಕಿ ತಗುಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ರಾತ್ರಿ 12.45ಕ್ಕೆ ಅಗ್ನಿಶಾಮಕ ದಳದ ವಾಹನ ಮತ್ತು ಸಿಬ್ಬಂದಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು.
ಕಾಳಪ್ಪ ಅವರ ಹಗ್ಗ ಮಾರಾಟ ಅಂಗಡಿ ₹60 ರಿಂದ ₹70 ಲಕ್ಷ, ಮಹ್ಮದ್ ಸುಲೇಮಾನ್‌ರ ಬಟ್ಟೆ ಅಂಗಡಿ ₹10 ರಿಂದ ₹12 ಲಕ್ಷ, ಅನುರಾಗ್ ಫ್ಯಾನ್ಸಿ ಸ್ಟೋರ್‌ನ ದೆಹಲಿ ಬಜಾರ್ ₹20 ರಿಂದ ₹25 ಲಕ್ಷ, ಫಯಾಜ್‌ರ ಬಟ್ಟೆ ಅಂಗಡಿ ₹4 ರಿಂದ ₹6 ಲಕ್ಷ, ರಬ್ಬಾನಿ ಅವರ ಹೊಲಕ್ಕೆ ಎಣ್ಣೆ ಹೊಡೆಯುವ ಮಿಷನ್ಗಳ ರಿಪೇರಿ ಅಂಗಡಿ ₹8 ರಿಂದ ₹10 ಲಕ್ಷ, ಅಜಮೀರ್ ಅವರ ಸಿತಾರ ಚಿಕನ್ ಅಂಗಡಿ ₹3 ರಿಂದ ₹4 ಲಕ್ಷ ಹಾನಿಯಾಗಿದೆ ಎಂದು ಅಂಗಡಿಗಳ ಮಾಲೀಕರು ತಿಳಿಸಿದರು. ಈ ಕುರಿತು ಅಗ್ನಿಶಾಮಕ ದಳದ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.