ಸಾರಾಂಶ
ಬೆಂಕಿ ತಗುಲಿ ಸುಟ್ಟು ಕರಕಲಾದ ಗುಜರಿ ವಸ್ತುಗಳು
ಕನ್ನಡಪ್ರಭ ವಾರ್ತೆ ಬೆಂಗಳೂರು
ಗುಜರಿ ವಸ್ತುಗಳನ್ನು ಸಂಗ್ರಹಿಸಿದ್ದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರು. ಮೌಲ್ಯದ ಗುಜರಿ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬೇಗೂರಿನ ಅಕ್ಷಯನಗರದಲ್ಲಿ ಭಾನುವಾರ ಮಧ್ಯಾಹ್ನ ಸುಮಾರು 12.30ಕ್ಕೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ.
ಮಧ್ಯಾಹ್ನ ಗೋದಾಮಿನಲ್ಲಿ ಏಕಾಏಕಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಇಡೀ ಗೋದಾಮಿಗೆ ವ್ಯಾಪಿಸಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ 4 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಗೋದಾಮಿನ ಅಕ್ಕಪಕ್ಕ 3-4 ಗುಜರಿ ಅಂಗಡಿಗಳಿದ್ದು, ಸಮೀಪದಲ್ಲೇ ಕಾರ್ಮಿಕರ ಗುಡಿಸಲುಗಳಿವೆ. ಮಧ್ಯಾಹ್ನ ಗೋದಾಮು ಪಕ್ಕದಲ್ಲಿದ್ದ ಕಸದ ಗುಡ್ಡಿಗೆ ಯಾರೋ ಬೆಂಕಿ ಹಾಕಿದ್ದರು ಎನ್ನಲಾಗಿದೆ. ಅದರ ಕಿಡಿ ಗೋದಾಮಿಗೆ ತಗುಲಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೋದಾಮಿನಲ್ಲಿ ಪೇಪರ್ ಬಂಡಲ್‌ಗಳು, ಕಾಟನ್ ಬಾಕ್ಸ್‌ಗಳು, ವೈಯರ್‌ಗಳು ಹೆಚ್ಚಾಗಿದ್ದರಿಂದ ಬೆಂಕಿಯ ಪ್ರಮಾಣ ಹೆಚ್ಚಾಗಿ ಇಡೀ ಗೋದಾಮಿಗೆ ವ್ಯಾಪಿಸಿದೆ. ಅವಘಡದಲ್ಲಿ ಲಕ್ಷಾಂತರ ರು. ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಭಸ್ಮವಾಗಿವೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.