ಸಾರಾಂಶ
- ಅರಣ್ಯ ಸಿಬ್ಬಂದಿ-ಗ್ರಾಮಸ್ಥರ ತಂಡಗಳ ರಚಿಸಿ ಬೆಂಕಿ ನಂದಿಸಲು ಕ್ರಮ । ಗಾಂಜಾ ಗಿಡಗಳ ಪತ್ತೆಗೂ ಬೇಕಿದೆ ಕ್ರಮ - - - ಬಾ.ರಾ.ಮಹೇಶ್, ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿತಾಲೂಕಿನ ಪ್ರಸಿದ್ಧ ಸೂಳೆಕೆರೆ ಇಡೀ ರಾಜ್ಯದಲ್ಲಿಯೇ ಹೆಸರು ಪಡೆದ ಸ್ಥಳವಾಗಿದ್ದು, ಕೆರೆಗೆ ಕಾವಲು ಗೋಪುರದಂತಿರುವ ಬೆಟ್ಟದಲ್ಲಿ ಪ್ರತಿ ವರ್ಷ ಮೂಡಣಗಾಳಿ ಬೀಸುವ ಚಳಿಗಾಲದಲ್ಲಿ ಬೆಂಕಿ ಬೀಳುತ್ತಿದೆ. ಕಳೆದ ಮೂರು- ನಾಲ್ಕು ದಿನಗಳ ಹಿಂದೆ ಸೂಳೆಕೆರೆಯ ಗುಡ್ಡಕ್ಕೆ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಈ ಪ್ರದೇಶ ತಾಲೂಕಿನ ಮಾವಿನಕಟ್ಟೆ, ಶಾಂತಿಸಾಗರ ವಲಯ ಅರಣ್ಯ ಪ್ರದೇಶಕ್ಕೆ ಸೇರಿದೆ. ಸೂಳೆಕೆರೆ ದಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಹಿಡಿದು ರುದ್ರಾಪುರ ಗ್ರಾಮ ಮತ್ತು ಇನ್ನೊಂದು ಬದಿಯ ಬಸವರಾಜಪುರ ಗ್ರಾಮವರೆಗೂ ಜನರು ಹತ್ತಿ ಇಳಿಯಬಹುದಾದ ಸಣ್ಣದಾದ ಗುಡ್ಡಗಳಿವು.ಈ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ಕಾಡುಮರಗಳನ್ನು ಬೆಳೆಸುವಲ್ಲಿ ಸರ್ಕಾರ ಕೋಟ್ಯಂತರ ರು. ಅನುದಾನ ಖರ್ಚು ಮಾಡಿದೆ. ಕರಡಿ, ಚಿರತೆ, ನವಿಲು, ಜಿಂಕೆ. ಹಾವು, ಮೊಲಗಳಂಥ ಕಾಡುಪ್ರಾಣಿಗಳು ಸಹ ಇಲ್ಲಿ ವಾಸವಾಗಿವೆ. ಭದ್ರಾನಾಲೆಯೂ ಈ ಗುಡ್ಡದ ಪಕ್ಕದಲ್ಲಿಯೇ ಹರಿಯುತ್ತಿದೆ.
ಸೂಳೆಕೆರೆಯಲ್ಲಿ ಕಾಡುಪ್ರಾಣಿಗಳು ಹಗಲು-ರಾತ್ರಿ ಬಂದು ನೀರು ಕುಡಿಯುತ್ತವೆ. ಮಾವಿನಕಟ್ಟೆ, ಶಾಂತಿಸಾಗರ ವಲಯ ಅರಣ್ಯ ಪ್ರದೇಶವು ಚನ್ನಗಿರಿ ವಲಯ ಅರಣ್ಯ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿದ್ದು, ಕಾಡಾನೆಗಳ ಸಂಚಾರ ಸಹ ಇದೆ. ಇಂಥ ವನಸಂಪತ್ತಿನ ಪ್ರದೇಶದ ಗುಡ್ಡಗಳು ಹಾಗೂ ಕೆರೆ ಪ್ರದೇಶವನ್ನು ಬೆಂಕಿ ಮತ್ತಿತರ ಅವಘಡಗಳಿಂದ ರಕ್ಷಿಸಬೇಕಾಗಿದೆ.ಸೂಳೆಕೆರೆಯ ಗುಡ್ಡದಲ್ಲಿ ಮರ-ಗಿಡಗಳ ಮಧ್ಯೆ ಬಾದೆಹುಲ್ಲು ಬೆಳೆಯುತ್ತದೆ. ಗ್ರಾಮಗಳ ಜನರು ದನಕರುಗಳನ್ನು ಮೇಯಿಸಲು ಹೋದ ಸಂದರ್ಭ ಬೀಡಿ, ಸೀಗರೇಟು ಸೇದಿ ಕಿಡಿಯಾರಿಸದೇ ಎಸೆಯುವ ಸಾಧ್ಯತೆಗಳಿವೆ. ಗುಡ್ಡದ ಅಕ್ಕಪಕ್ಕದಲ್ಲಿರುವ ಅಡಕೆ ತೋಟದ ಬೆಳೆಗಾರರು ಬದುವಿನ ಮೇಲೆ ಬೆಂಕಿ ಹಾಕುವುದೂ ಇದೆ. ಇದರಿಂದಲೂ ಬೆಂಕಿಯ ಕಿಡಿಗಳು ಗಾಳಿ ಮೂಲಕ ಪಸರಿಸಿ, ಒಣಎಲೆ, ಬಾದೆಹುಲ್ಲಿಗೆ ಸೋಕಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಒಟ್ಟಿನಲ್ಲಿ ಸೂಳೆಕೆರೆ ಗುಡ್ಡದಲ್ಲಿ ಕಾಳ್ಗಿಚ್ಚಿನಂಥ ಬೆಂಕಿಯಂತೂ ಸೃಷ್ಟಿಯಾಗಿ ಪರಿಸರ ನಾಶವಾಗುತ್ತಿದೆ.
ರೈತ ಸಂಘದ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ಹೇಳುವಂತೆ, ಅರಣ್ಯ ಇಲಾಖೆಗೆ ಸೇರಿದ ಈ ಗುಡ್ಡದಲ್ಲಿ ಕೆಲವರು ಮಾವಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ಅಲ್ಲದೇ, ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದಾರೆ. ಸೂಳೆಕೆರೆ ಗುಡ್ಡ ಪರಿಸರ ಸೂಕ್ಷ್ಮವಾಗಿ ಜಾಲಾಡಿದರೆ ಗಾಂಜಾ ಗಿಡಗಳು ಸಿಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ.ಸೂಳೆಕೆರೆ ಗುಡ್ಡದಲ್ಲಿ ಬೆಂಕಿಬಿದ್ದು ಬಯಲಾಗುವ ಪ್ರದೇಶಗಳು ಭೂಮಿ ಒತ್ತುವರಿಗೆ ಕಾರಣವಾಗಿದೆ. ಈ ಗುಡ್ಡದ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಬಿಗಿಯಾದ ಗಸ್ತು ವ್ಯವಸ್ಥೆ ಕೈಗೊಳ್ಳಬೇಕು ಎಂಬುದು ಪರಿಸರಾಸಕ್ತರ ಒತ್ತಾಯವಾಗಿದೆ.
- - - ಬಾಕ್ಸ್ ಶಾಂತಿಸಾಗರ, ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಎಂ.ಉಷಾ ಈ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದು, ಈ ಅರಣ್ಯ ಪ್ರದೇಶದ ವ್ಯಾಪ್ತಿಗೆ ಹೊಸದಾಗಿ ಬಂದಿದ್ದೇನೆ. ವಲಯ ವ್ಯಾಪ್ತಿಯಲ್ಲಿ ಸುತ್ತಾಡಿ, ಗಮನಿಸಿದ್ದೇನೆ. ಸೂಳೆಕೆರೆಯ ಒಂದುಭಾಗದ ಗುಡ್ಡದಲ್ಲಿ ಪ್ರತಿ ವರ್ಷ ಬೆಂಕಿ ಬೀಳುತ್ತಿದೆ. ಇದನ್ನು ತಡೆಗಟ್ಟಲು ಪೈರ್ ಲೈನ್ ಕಂದಕ ಮಾಡುವುದು, ಗುಡ್ಡದ ಸುತ್ತಲೂ ಇರುವ ಗ್ರಾಮಗಳಲ್ಲಿ ಬೀದಿನಾಟಕಗಳ ಮೂಲಕ ಜನಜಾಗೃತಿ ಮೂಡಿಸಲಾಗುವುದು. ಇಲಾಖೆ ಸಿಬ್ಬಂದಿ ಸದಾ ಜಾಗೃತರಾಗಿದ್ದು, ಬೆಂಕಿ ಕಾಣಿಸಿಕೊಂಡ ಕೂಡಲೇ ಅಕ್ಕಪಕ್ಕದ ಗ್ರಾಮಗಳ ಜನರ ಸಹಕಾರ ಪಡೆದು ಹಸಿಸೊಪ್ಪಿನ ಬರಲಿನಿಂದ ಬೆಂಕಿ ನಂದಿಸುವ ಕೆಲಸ ಮಾಡಲು ತಂಡಗಳನ್ನು ರೆಡಿ ಮಾಡಲಾಗಿದೆ ಎಂದಿದ್ದಾರೆ.ಗುಡ್ಡದಲ್ಲಿ ಬಾದೆ ಹುಲ್ಲು ಬೆಳೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ವಲಯ ಅರಣ್ಯ ಪ್ರದೇಶಕ್ಕೆ 9ರಿಂದ 10 ಅರಣ್ಯ ರಕ್ಷಕರ ಹುದ್ದೆ ಖಾಲಿಯಾಗಿವೆ. ಇರುವ ಸಿಬ್ಬಂದಿ ಬಳಸಿಯೇ ಪ್ರಾಮಾಣಿಕ ಕೆಲಸ ನಡೆಯುತ್ತಿದೆ. ಅರಣ್ಯ ಅಪರಾಧಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
- - - -20ಕೆಸಿಎನ್‌ಜಿ1, 2: ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು.-20ಕೆಸಿಎನ್‌ಜಿ3: ಬೆಂಕಿ ನಂದಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ.