ನವಲಗುಂದ:

ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂದು ಒತ್ತಾಯಿಸಿ ಗುರುವಾರ ಉತ್ತರ ಕರ್ನಾಟಕ ಪರಿವರ್ತನಾ ಸಮುದಾಯದ ಸಂಘದಿಂದ ತಹಸೀಲ್ದಾರ್‌ ಕಚೇರಿ ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮುಖಂಡ ಮಾಬುಸಾಬ ಯರಗುಪ್ಪಿ ಮಾತನಾಡಿ, ತಾಲೂಕು ಕೇಂದ್ರವಾಗಿರುವ ನವಲಗುಂದದಲ್ಲಿ ಈ ವರೆಗೂ ಸ್ವತಂತ್ರ ಅಗ್ನಿಶಾಮಕ ಠಾಣೆ ಇಲ್ಲದಿದೆ ಇರುವುದರಿಂದ ಅಗ್ನಿ ಅವಘಡ ಸಂಭಂವಿಸಿದ ವೇಳೆ ತೀವ್ರ ತೊಂದರೆಯಾಗುತ್ತಿದೆ. ಇಂತಹ ಘಟನೆಗಳು ನಡೆದಾಗ ಅಣ್ಣಿಗೇರಿ ಅಥವಾ ನರಗುಂದದಿಂದ ಬರುವ ಅಗ್ನಿಶಾಮಕ ದಳದ ಮೇಲೆ ಅವಲಂಬಿತರಾಗಬೇಕಿದೆ. ಆದರಿಂದ ಕೂಡಲೇ ನೂತನ ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಮಲ್ಲಿಕಾರ್ಜುನಸ್ವಾಮಿ ಮಠಪತಿ ಮಾತನಾಡಿ, ಈಚೆಗೆ ಪಟ್ಟಣದ ನೀಲಮ್ಮನ ಕೆರೆಯ ದಂಡೆಯ ಮೇಲಿರುವ ಬಣವೆಗಳಿಗೆ ಬೆಂಕಿ ತಗುಲಿ ಅಪಾರ ಹಾನಿಯಾಯಿತು. ಇದೇ ರೀತಿ ಸಾಕಷ್ಟು ಘಟನೆಗಳಿಂದ ರೈತರಿಗೆ ತೀವ್ರ ತೊಂದರೆಯಾಗಿದ್ದು ಸಾವು-ನೋವು ಸಂಭಂವಿಸಿವೆ ಬೇಸರ ವ್ಯಕ್ತಪಡಿಸಿದರು.

ಎಸ್.ಎಸ್. ಕಂಬಳಿ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ರೈತರ ಆಸ್ತಿ- ಪಾಸ್ತಿ ರಕ್ಷಣೆಗಾಗಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯು ಪಟ್ಟಣಕ್ಕೆ ಸುಸಜ್ಜಿತ ಅಗ್ನಿಶಾಮಕ ಠಾಣೆ, ಅಗತ್ಯ ವಾಹನ ಹಾಗೂ ಸಿಬ್ಬಂದಿ ನಿಯೋಜಿಸಬೇಕೆಂದು ಒತ್ತಾಯಿಸಿದರು.


ಈ ವೇಳೆ ಮೆಹಬೂಬಸಾಬ್‌ ಅಸಗಿ, ಮಹಮ್ಮದಲಿ ಮಿರ್ಜಿ, ಶಿವಲಿಂಗಯ್ಯ ಹಿರೇಮಠ, ಇಮ್ತಿಯಾಜ್ ಖತಿಬ್, ಶರೀಫ ಹುಡೇದ, ಮುಜೀಬ್ ಬಳ್ಳಾರಿ, ಬಸವರಾಜ ಮಲ್ಲದಾಸರ, ಸದ್ದಾಂಹುಸೇನ್ ಯರಗುಪ್ಪಿ, ಮಾಬುಲಿ ಮುಲ್ಲಾ, ಮಾಬುಸಾಬ ಕೆರೂರ ಸೇರಿದಂತೆ ಹಲವರಿದ್ದರು.