ಕಾರ್ತಿಕ ಮಾಸದೊಂದಿಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ವ್ರತಾಚರಣೆ, ಭಜನೆ, ಅನ್ನದಾನ ಹಾಗೂ ಶಬರಿಮಲೆ ಯಾತ್ರೆಯ ಸಂಭ್ರಮ ರಾಜ್ಯದೆಲ್ಲೆಡೆ ಮನೆಮಾಡಿದೆ.
ಈರಪ್ಪ ನಾಯ್ಕರ್
ಹುಬ್ಬಳ್ಳಿ:ಕಾರ್ತಿಕ ಮಾಸದೊಂದಿಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ವ್ರತಾಚರಣೆ, ಭಜನೆ, ಅನ್ನದಾನ ಹಾಗೂ ಶಬರಿಮಲೆ ಯಾತ್ರೆಯ ಸಂಭ್ರಮ ರಾಜ್ಯದೆಲ್ಲೆಡೆ ಮನೆಮಾಡಿದೆ. ಗಲ್ಲಿ-ಗಲ್ಲಿಗಳಲ್ಲಿ ತಾತ್ಕಾಲಿಕ ಅಯ್ಯಪ್ಪ ಸನ್ನಿಧಾನಗಳು ಸಿದ್ಧಗೊಳ್ಳುತ್ತಿವೆ. ಆದರೆ, ಭಕ್ತಿಯ ಸಂಭ್ರಮದ ನಡುವೆ ಅಗ್ನಿ ಸುರಕ್ಷತೆ ಮರೆಯಬಾರದು.ಕಳೆದ 2 ವರ್ಷದ ಹಿಂದೆ ಹುಬ್ಬಳ್ಳಿಯ ಉಣಕಲ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಇಂದಿಗೂ ಮಾಸದ ನೋವು. ಗ್ಯಾಸ್ ಸಿಲಿಂಡರ್ ಸೋರಿಕೆ, ದೀಪದ ಕಿಡಿ ಮತ್ತು ಒಂದೇ ಕೋಣೆಯಲ್ಲಿ ಮಲಗಿದ್ದ ಮಾಲಾಧಾರಿಗಳು. ಕ್ಷಣಾರ್ಧದಲ್ಲಿ ಸಂಭವಿಸಿದ ದುರಂತ ಎಂಟು ಜೀವಗಳನ್ನು ಬಲಿ ಪಡೆದಿತ್ತು. ಈ ಕಹಿ ಘಟನೆ ಮರುಕಳಿಸದಂತೆ ರಾಜ್ಯದ ಎಲ್ಲ ಅಯ್ಯಪ್ಪ ಸನ್ನಿಧಾನಗಳಲ್ಲೂ ಈ ಬಾರಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಅಗತ್ಯವಾಗಿದೆ.
ಎಂಟು ಜೀವ ಬಲಿ ಪಡೆದ ಅಗ್ನಿ ದುರಂತ:2024ರ ಡಿ. 23ರಂದು ಹುಬ್ಬಳ್ಳಿಯ ಉಣಕಲ್ನ ಅಚ್ಚವ್ವನ ಕಾಲನಿ ಅಯ್ಯಪ್ಪ ಸನ್ನಿಧಾನದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಭೀಕರ ಸ್ಫೋಟ ಸಂಭವಿಸಿತ್ತು. ದೇವರ ಮುಂದೆ ಹಚ್ಚಿದ್ದ ದೀಪದ ಜ್ವಾಲೆ ಸೋರಿಕೆಯಾಗಿದ್ದ ಅನಿಲಕ್ಕೆ ತಗುಲಿದ ಪರಿಣಾಮ ಸಂಭವಿಸಿದ ದುರಂತದಲ್ಲಿ ಒಂದೇ ಕೋಣೆಯಲ್ಲಿ ಮಲಗಿದ್ದ ಒಂಬತ್ತು ಮಾಲಾಧಾರಿಗಳ ಪೈಕಿ ಎಂಟು ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಇದಾದ ಬಳಿಕ 2025ರ ಡಿಸೆಂಬರ್ನಲ್ಲಿ ಹುಬ್ಬಳ್ಳಿಯ ಹೊಸೂರ ಸಮೀಪದ ಮತ್ತೊಂದು ತಾತ್ಕಾಲಿಕ ಅಯ್ಯಪ್ಪ ಸನ್ನಿಧಾನದ ಶೆಡ್ ಬೆಂಕಿಗಾಹುತಿಯಾಗಿತ್ತು. 2021ರಲ್ಲಿ ರುದ್ರದೇವರ ಹಕ್ಕಲದ ಕರಿಯಮ್ಮ ದೇವಿ ದೇವಸ್ಥಾನದಲ್ಲಿಯೂ ಅಗ್ನಿ ಅವಘಡ ಸಂಭವಿಸಿತ್ತು. ಸರಣಿ ಘಟನೆಗಳು ತಾತ್ಕಾಲಿಕ ಸನ್ನಿಧಾನಗಳ ಸುರಕ್ಷತೆಯ ಗಂಭೀರತೆಯನ್ನು ಸಾರುತ್ತಿವೆ.ಗ್ಯಾಸ್, ದೀಪ, ವಸ್ತ್ರಗಳೇ ಅಪಾಯ:
ಅನ್ನದಾನ ಮತ್ತು ಪ್ರಸಾದ ತಯಾರಿಕೆಗೆ ಬಳಸುವ ಗ್ಯಾಸ್ ಸಿಲಿಂಡರ್ಗಳನ್ನು ಭಕ್ತರು ಮಲಗುವ ಅಥವಾ ಪೂಜೆ ಸಲ್ಲಿಸುವ ಕೋಣೆಯಲ್ಲಿಯೇ ಇಡುವುದು ಅಪಾಯಕಾರಿ. ಅಡುಗೆ ಸ್ಥಳ ಪ್ರತ್ಯೇಕವಾಗಿದ್ದು, ಗಾಳಿಯಾಡುವ ವ್ಯವಸ್ಥೆ ಇರಬೇಕು. ಬಳಕೆಯ ನಂತರ ರೆಗ್ಯುಲೇಟರ್ ಬಂದ್ ಮಾಡುವುದು ಕಡ್ಡಾಯ.ಸನ್ನಿಧಾನಗಳಲ್ಲಿ ಮಾಲಾಧಾರಿಗಳ ಕಪ್ಪು-ನೀಲಿ ಪಂಚೆ, ಶಲ್ಯ, ಟವೆಲ್ ಹಾಗೂ ಹೊದಿಕೆಗಳನ್ನು ಎಲ್ಲೆಂದರಲ್ಲಿ ನೇತುಹಾಕುವುದು ಸಾಮಾನ್ಯ. ಇವು ದೀಪದ ಜ್ವಾಲೆಗೆ ತಗುಲಿದರೆ ಇಡೀ ಶೆಡ್ಗೆ ಬೆಂಕಿ ವ್ಯಾಪಿಸಬಹುದು. ಕರ್ಪೂರದ ಆರತಿ, ತುಪ್ಪದ ದೀಪ ಹಚ್ಚುವಾಗಲೂ ನಿರಂತರ ನಿಗಾ ಅಗತ್ಯ. ಮೇಲ್ಚಾವಣಿಯಲ್ಲಿ ಪ್ಲಾಸ್ಟಿಕ್ ತೋರಣ, ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಅಲಂಕಾರಿಕ ವಸ್ತ್ರಗಳನ್ನು ಬಳಸುವುದನ್ನು ತಪ್ಪಿಸಬೇಕು.
ಸನ್ನಿಧಾನಗಳಲ್ಲಿ ಇರಲಿ ಸುರಕ್ಷತಾ ಕವಚ- ಗ್ಯಾಸ್ ಸಿಲಿಂಡರ್ ಮತ್ತು ಅಡುಗೆ ಕೋಣೆಯನ್ನು ಪೂಜಾ ಹಾಗೂ ವಿಶ್ರಾಂತಿ ಸ್ಥಳದಿಂದ ಪ್ರತ್ಯೇಕಿಸಬೇಕು.
- ಬಟ್ಟೆಗಳನ್ನು ದೀಪಗಳಿಂದ ದೂರದಲ್ಲಿ ಒಣಗಿಸಲು ವ್ಯವಸ್ಥೆ ಮಾಡಬೇಕು.- ತುರ್ತು ಸಂದರ್ಭದಲ್ಲಿ ಹೊರಬರಲು ಪ್ರತ್ಯೇಕ ನಿರ್ಗಮನ ಮಾರ್ಗ ಇರಬೇಕು.
- ಅಗ್ನಿಶಾಮಕ ಸಾಧನ, ಮರಳು ತುಂಬಿದ ಬಕೆಟ್ ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆ ಕಡ್ಡಾಯವಾಗಿರಲಿ.- ವಿದ್ಯುತ್ ವೈರಿಂಗ್ ಮತ್ತು ಸಂಪರ್ಕಗಳನ್ನು ಪರಿಶೀಲಿಸಿ, ಅನಗತ್ಯ ವಿದ್ಯುತ್ ಉಪಕರಣಗಳ ಬಳಕೆ ತಪ್ಪಿಸಬೇಕು.ಅಯ್ಯಪ್ಪ ಸನ್ನಿಧಾನಗಳಲ್ಲಿ ಶುದ್ಧ ಗಾಳಿ, ಬೆಳಕು ಬರುವ ವ್ಯವಸ್ಥೆ ಇರಬೇಕು. ಮಾಲಾಧಾರಿಗಳು ಉಳಿದುಕೊಳ್ಳಲು, ಪ್ರಸಾದ ತಯಾರಿಸಲು ಹಾಗೂ ಪೂಜೆ ಸಲ್ಲಿಸಲು ವ್ಯವಸ್ಥಿತ ಸೌಲಭ್ಯ ಕಲ್ಪಿಸಬೇಕು. ಮಾಲೆ ಧರಿಸಲು ಬರುವ ಭಕ್ತರಿಗೆ ಮತ್ತು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದಾಗಲೂ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವ್ರತಾಚರಣೆಯನ್ನು ಶ್ರದ್ಧೆ, ಶಿಸ್ತು ಹಾಗೂ ಸುರಕ್ಷತೆಯೊಂದಿಗೆ ಪಾಲಿಸಬೇಕು.
ಆನಂದ ಗುರುಸ್ವಾಮಿ, ಹುಬ್ಬಳ್ಳಿಯ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ನ ಧರ್ಮದರ್ಶಿ