ಸೀನಿಯರ್ ಚೇಂಬರ್ ವತಿಯಿಂದ ಅಗ್ನಿ ಶಾಮಕ ದಳದ ಚಾಲಕ ತಂತ್ರಜ್ಞರಾದ ಕುಮಾರ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಆಶ್ರಯದಲ್ಲಿ ಅಗ್ನಿಶಾಮಕದಳದಿಂದ ಪ್ರಾತ್ಯಕ್ಷಿಕೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಯಾವುದೇ ಅಗ್ನಿ ಅನಾಹುತವಾದರೂ ಅಗ್ನಿಶಾಮಕ ದಳದವರು ತುರ್ತಾಗಿ ಬಂದು ಬೆಂಕಿ ನಂದಿಸುವ ಕೆಲಸ ಮಾಡುತ್ತಾರೆ ಎಂದು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಅಧ್ಯಕ್ಷ ಎಸ್.ಎಸ್.ಜಗದೀಶ್ ಪ್ರಶಂಸೆ ವ್ಯಕ್ತಪಡಿಸಿದರು.ಅವರು ಶನಿವಾರ ಮೆಣಸೂರು ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ, ಮೌಂಟ್ ಕಾರ್ಮೆಲ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಅಗ್ನಿ ಶಾಮಕ ಇಲಾಖೆಯಿಂದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅನೇಕ ಸಂದರ್ಭದಲ್ಲಿ ಎತ್ತರದ ಕಟ್ಟಡದ ಮೇಲೆ ಬೆಂಕಿ ಬಿದ್ದಾಗ ಅಗ್ನಿ ಶಾಮಕ ದಳದವರು ತಮ್ಮ ಜೀವದ ಹಂಗು ತೊರೆದು ಬೆಂಕಿ ನಂದಿಸುತ್ತಾರೆ. ಬೇಸಿಗೆ ಸಮಯದಲ್ಲಿ ಕಾಡಿಗೆ ಬೆಂಕಿ ಬಿದ್ದಾಗ ಅಗ್ನಿ ಶಾಮಕ ದಳದ ಇಂಜಿನ್ ಕಾಡಿಗೆ ಹೋಗಲು ಸಾಧ್ಯವಾಗುವುದಿಲ್ಲ. ಆಗ ಸಿಲಿಂಡರ್ ಹಿಡಿದುಕೊಂಡು ಕಾಡಿಗೆ ಹೋಗಿ ಬೆಂಕಿ ನಂದಿಸುವುದನ್ನು ಸಹ ಕಂಡಿದ್ದೇವೆ ಎಂದರು.1990 ರಲ್ಲಿ ಎನ್.ಆರ್.ಪುರದಲ್ಲಿ ಜೇಸಿ ಸಂಸ್ಥೆ ಪ್ರಾರಂಭವಾಗಿತ್ತು. ಜೇಸಿ ಸಂಸ್ಥೆಗೆ 18ರಿಂದ 40 ವರ್ಷದ ವಯೋಮಾನದವರಿಗೆ ಮಾತ್ರ ಅವಕಾಶವಿದೆ. ಆದ್ದರಿಂದ 2018 ರಿಂದ 40 ವರ್ಷ ದಾಟಿದ ಜೇಸಿ ಸದಸ್ಯರು ಸೇರಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಪ್ರಾರಂಭಿಸಿದ್ದೇವೆ. ನಾನು ಅಧ್ಯಕ್ಷನಾದ ಮೇಲೆ ಬಹುತೇಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಾಲಾ ಪರಿಕರ ನೀಡಿದ್ದೇವೆ ಎಂದರು.
ಅಗ್ನಿ ಶಾಮಕ ದಳದ ಪ್ರಮುಖ ಅಗ್ನಿ ಶಾಮಕ್ ಸಂತೋಷ್ ಕುಮಾರ್ ಮಾತನಾಡಿ, ಕೊಠಡಿಯಲ್ಲಿ ಗ್ಯಾಸ್ ಸಿಲಿಂಡರ್ ಸೋರುತ್ತಿದ್ದರೆ ತಕ್ಷಣ ಕಿಟಕಿ, ಬಾಗಿಲು ತೆರೆಯಬೇಕು. ಲೈಟ್ ಆಪ್ ಅಥವಾ ಆನ್ ಆಗಿದ್ದರೆ ಯಥಾ ಸ್ಥಿತಿ ಇಡಬೇಕು. ಮೊಬೈಲ್ ಟಾರ್ಚ್ ಆನ್ ಮಾಡಬಾರದು. ಮನೆ, ಕಟ್ಟಡ, ವಾಹನಕ್ಕೆ ಬೆಂಕಿ ಬಿದ್ದರೆ ಮರಳು, ನೀರು ಹಾಕಿ ನಂದಿಸುವ ಪ್ರಯತ್ನ ಮಾಡಬಹುದು. ತಕ್ಷಣ ಅಗ್ನಿ ಶ್ಯಾಮಕ ಠಾಣೆಗೆ ಕರೆ ಮಾಡಿ ತಿಳಿಸಬಹುದು. ಈ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತೇವೆ ಎಂದರು.ಆರೋಗ್ಯ ಇಲಾಖೆಯ ತಾಲೂಕು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ.ಆಕಾಶ್ ಮಂಗನ ಕಾಯಿಲೆ ಬಗ್ಗೆ ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಶುಭ ವಹಿಸಿದ್ದರು. ಸಭೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ಸದಸ್ಯರಾದ ಕುಮಾರಶೆಟ್ಟಿ, ಲಕ್ಷ್ಮೀಶ, ಎಚ್.ಟಿ.ಧನಂಜಯ, ಅಗ್ನಿ ಶಾಮಕ ದಳದ ಠಾಣಾಧಿಕಾರಿ ದೇವೇಂದ್ರನಾಯಕ್, ಚಾಲಕ ತಂತ್ರಜ್ಞ ಕುಮಾರ ನಾಯಕ್, ಸಿಬ್ಬಂದಿ ನವೀನ್, ರಾಘವೇಂದ್ರ, ಶಿವಾನಂದ್,ಸಂದೀಪ್ ಇದ್ದರು.ಇದೇ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ವತಿಯಿಂದ ಅಗ್ನಿ ಶಾಮಕ ದಳದ ಚಾಲಕ ತಂತ್ರಜ್ಞರಾದ ಕುಮಾರ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಉಪನ್ಯಾಸಕಿ ನಂದಿನಿ ಆಲಂದೂರು ಸ್ವಾಗತಿಸಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಕಾರ್ಯಕ್ರಮ ನಿರೂಪಿಸಿದರು. ನಂತರ ಅಗ್ನಿ ಶಾಮಕ ದಳದವರು ಕಾಲೇಜಿನ ವಿದ್ಯಾರ್ಥಿಗಳಿಗೆ ಬೆಂಕಿ ಬಿದ್ದಾಗ ನಡೆಸುವ ಕಾರ್ಯಾಚರಣೆ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.