ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರ ಸಮೀಪದ ಅಂಜುತಂಬಲಂ ವೀರರ್ಕಾವ್ ದೈವ ಕ್ಷೇತ್ರದಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ತಯ್ಯಂ ಉತ್ಸವದಲ್ಲಿ ಪಟಾಕಿ ಸಿಡಿಸಿದ ವೇಳೆ ಉಂಟಾದ ಅವಘಡದಲ್ಲಿ ಒಟ್ಟು 154 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಸೇರಿದಂತೆ ಕಾಸರಗೋಡಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಒಟ್ಟು 154 ಮಂದಿಯಲ್ಲಿ 97 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಈ ಪೈಕಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಶೇ.80ಕ್ಕಿಂತ ಅಧಿಕ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 21, ಕಣ್ಣೂರು ಎಂಐಎಂ ಆಸ್ಪತ್ರೆಯಲ್ಲಿ 18, ಕಾಞಂಗಾಡ್ ಐಶಾಲ್ ಆಸ್ಪತ್ರೆಯಲ್ಲಿ 17, ಜಿಲ್ಲಾಸ್ಪತ್ರೆಯಲ್ಲಿ 16 ಹಾಗೂ ಸಂಜೀವಿನಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳದ ಉತ್ತರ ಮಲಬಾರ್ ಭಾಗದಲ್ಲಿ ತೆಯ್ಯಂ ಉತ್ಸವ ವಿಶೇಷವಾಗಿದ್ದು, ಚಾಮುಂಡಿ ದೈವಕ್ಕೆ ನಡೆಯುವ ಉತ್ಸವ ಇದಾಗಿದೆ. ನೀಲೇಶ್ವರದಲ್ಲಿ ಈ ವರ್ಷದ ಮೊದಲ ತೈಯ್ಯಂ ಉತ್ಸವವಾಗಿದ್ದು, ಸೋಮವಾರ ರಾತ್ರಿ ಆರಂಭಗೊಂಡಿತ್ತು. ಉತ್ಸವ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿಸಲಾಗಿತ್ತು. ಬಳಿಕ ಪಟಾಕಿ ದಾಸ್ತಾನು ಇರಿಸಿದ ಕಟ್ಟಡ ಬಳಿಯೇ ಸುಡುಮದ್ದು ಸಿಡಿಸಿದ ಪರಿಣಾಮ ಅದರ ಕಿಡಿ ಪಟಾಕಿ ದಾಸ್ತಾನಿಗೆ ಬಿದ್ದಿತ್ತು. ಇದರಿಂದಾಗಿ ಅಲ್ಲಿದ್ದ ಪಟಾಕಿ ರಾಶಿಗೆ ಏಕಕಾಲಕ್ಕೆ ಬೆಂಕಿ ತಗುಲಿ ಭಾರಿ ಸ್ಫೋಟ ಸಂಭವಿಸಿತ್ತು.ಘಟನೆ ವೇಳೆ ತೆಯ್ಯಂ ಉತ್ಸವ ನಡೆಯುತ್ತಿದ್ದು, ಉತ್ಸವ ನೋಡಲು ಆಗಮಿಸಿದ ಸಾವಿರಾರು ಮಂದಿ ಗಾಬರಿಯಿಂದ ಚಲ್ಲಾಪಿಲ್ಲಿಯಾಗಿ ಓಟಕ್ಕಿತ್ತಿದ್ದಾರೆ. ಹಲವು ಮಂದಿ ಬೆಂಕಿಯ ಅವಘಡಕ್ಕೆ ಒಳಗಾದರೆ, ಇನ್ನೂ ಕೆಲವು ಮಂದಿ ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡಿದ್ದಾರೆ.
ಉತ್ಸವಕ್ಕಾಗಿ ತೆಂಗಿನ ಗರಿಗಳಿಂದ ಮಾಡಿದ ರಚನೆಗಳಿಂದ ಕಟ್ಟಡ ಹಾಗೂ ಮೇಲ್ಭಾಗಕ್ಕೆ ಹಾಸಲಾಗಿತ್ತು. ಬೆಂಕಿ ತಗಲುವ ಸಂದರ್ಭ ಒಣಗಿದ ತೆಂಗಿನ ಗರಿ ಸುಲಭದಲ್ಲಿ ಉರಿದಿವೆ. ಘಟನೆ ಬಳಿಕ ದೇವಸ್ಥಾನದ ಪರಿಸರವನ್ನು ಪೊಲೀಸರು ಬಂದ್ ಮಾಡಿದ್ದು, ಉತ್ಸವವನ್ನು ಅರ್ಧದಲ್ಲೇ ನಿಲ್ಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಅವಘಡಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ವೀರರ್ಕಾವ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ವಶಕ್ಕೆ ಪಡೆದ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಕ್ರಮವಾಗಿ ಪಟಾಕಿ ದಾಸ್ತಾನು ಇರಿಸಿದ್ದು, ಸೂಕ್ತ ಅನುಮತಿ ಪಡೆದಿರಲಿಲ್ಲ ಹಾಗೂ ಸಾಕಷ್ಟು ಸುರಕ್ಷಾ ಕ್ರಮ ಕೈಗೊಂಡಿಲ್ಲ ಎಂದು ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಗಾಯಾಳುಗಳು ಆರೋಪಿಸಿದ್ದಾರೆ.ಕನಿಷ್ಠ ಜನ ಅಂತರ ಕಾಯ್ದುಕೊಳ್ಳದೆ ಪಟಾಕಿ ಸಿಡಿಸಲಾಯಿತು. ಕಾನೂನಿನ ಪ್ರಕಾರ 100 ಮೀಟರ್ ಅಗತ್ಯವಿದೆ. ಎರಡ್ಮೂರು ಅಡಿ ಅಂತರದಲ್ಲಿ ಪಟಾಕಿ ಸಿಡಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಟಾಕಿಗಳನ್ನು ಸಿಡಿಸುವ ಸಮೀಪದಲ್ಲಿಯೇ ಪಟಾಕಿ ಇಡುತ್ತಿರುವುದು ಅಪಾಯಕ್ಕೆ ಕಾರಣವಾಗಿತ್ತು. ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಇಂಬಶೇಖರ್ ತಿಳಿಸಿದ್ದಾರೆ.
ಬೆಂಕಿಯ ಕೆನ್ನಾಲಗೆಯಿಂದ ಮಗುವನ್ನು ರಕ್ಷಿಸಿದ ‘ದೈವ’!ನೀಲೇಶ್ವರದ ಅಂಜೂತಾಂಬಲಂ ವೀರರ್ಕಾವ್ ದೈವಸ್ಥಾನದಲ್ಲಿ ಸೋಮವಾರ ರಾತ್ರಿ ವಾರ್ಷಿಕ ಕಳಿಯಾಟ್ಟಂ ಉತ್ಸವದಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ ಸಿಲುಕಿದ ಮಗುವನ್ನು ‘ದೈವ’ ರಕ್ಷಿಸಿದ ವಿದ್ಯಮಾನ ನಡೆದಿದೆ.
ಸೋಮವಾರ ಮಧ್ಯರಾತ್ರಿ ಪಟಾಕಿ ಅವಘಡ ಸಂಭವಿಸಿದಾಗ ತೆಯ್ಯಂ(ದೈವ) ಆವೇಶದಿಂದ ನರ್ತಿಸುತ್ತಿತ್ತು. ಅಷ್ಟರಲ್ಲಿ ಗಡಚಿಕ್ಕುವ ಸದ್ದಿನೊಂದಿಗೆ ಪಟಾಕಿ ಅವಘಡ ಘಟಿಸಿದೆ. ಬೆಂಕಿಯ ಉಂಡೆ ಗಗನಕ್ಕೇರತೊಡಗಿದ್ದು, ಸುತ್ತಲೂ ಕೆನ್ನಾಲಗೆ ವ್ಯಾಪಿಸುತ್ತಿತ್ತು. ಇದನ್ನು ನೋಡಿದ ಜನತೆ ದಿಕ್ಕಾಪಾಲಾಗಿ ಓಡುತ್ತಿದ್ದರು. ಆಗ ಅಲ್ಲೇ ಇದ್ದ ದೈವ ಬೆಂಕಿಯಿಂದ ಮಗುವನ್ನು ಎತ್ತಿಕೊಂಡು ಬಂದು ಜೀವರಕ್ಷಿಸಿದೆ. ಅದೃಷ್ಟವಶಾತ್ ಮಗುವಿಗೆ ಸಣ್ಣಪುಟ್ಟ ಗಾಯ ಮಾತ್ರ ಆಗಿತ್ತು.ದೈವ ನರ್ತಕ ನಿಧಿನ್ ಪಣಿಕ್ಕರ್ ವೃತ್ತಿಯಿಂದ ಪೊಲೀಸ್ ಅಧಿಕಾರಿ. ದೈವಸ್ಥಾನದ ವಾರ್ಷಿಕ ಉತ್ಸವಗಳಿಗೆ ಅವರು ತಪ್ಪದೆ ತೆಯ್ಯಂ ಸೇವೆ ಮಾಡುತ್ತಾರೆ. ಪಟಾಕಿ ದುರಂತ ಸಂಭವಿಸಿದಾಕ್ಷಣ ಅವರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ದೈವದ ಪೊಷಾಕಿನಲ್ಲೇ ಅವರು ರಕ್ಷಣಾ ಕಾರ್ಯ ಮಾಡಿದ್ದಾರೆ.
‘ಪಟಾಕಿ ಅವಘಡ ಸಂಭವಿಸಿದಾಗ ಎಲ್ಲೆಡೆ ಕೋಲಾಹಲ ಉಂಟಾಗಿತ್ತು. ಜನರು ಓಡುತ್ತಿದ್ದರು. ಆಗ ಬೆಂಕಿಯ ನಡುವಿನಿಂದ ಮಗುವಿನ ಅಳು ಕೇಳಿತ್ತು. ಆ ಕ್ಷಣ ನನಗೆ ಏನಾಗಬಹುದು ಎಂದು ಯೋಚಿಸದೆ ಬೆಂಕಿಯ ಮಧ್ಯೆ ಧುಮುಕಿ ಮುವನ್ನು ಕಾಪಾಡಿದೆ. ದೈವದ ಕೃಪೆಯಿಂದ ನನಗೂ ಏನಾಗಲಿಲ್ಲ’ ಎಂದು ನಿಧಿನ್ ಪಣಿಕ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.-------------