ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳು ಮಳೆ ಇಲ್ಲದೇ ರಣ ಬಿಸಿಲಿನಲ್ಲಿಯೇ ಕೊನೆಗೊಂಡಿದೆ.
ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ 1901ರಿಂದ 2023ರವರೆಗೆ ಎಲ್ಲಾ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾದ ವರದಿಯಾಗಿದೆ. ಈ ಬಾರಿ ಏಪ್ರಿಲ್‌ನಲ್ಲಿ ಕನಿಷ್ಠ ಪ್ರಮಾಣ ಮಳೆಯಾದ ವರದಿಯಾಗಿಲ್ಲ.
1983ರ ಏಪ್ರಿಲ್‌ನಲ್ಲಿ 0.2 ಮಿ.ಮೀ.ನಷ್ಟು ಮಳೆಯಾಗಿತ್ತು. ಇದು ಈವರೆಗಿನ ಏಪ್ರಿಲ್‌ನಲ್ಲಿ ವರದಿಯಾದ ಅತಿ ಕನಿಷ್ಠ ಮಳೆಯಾಗಿದೆ.
ಹವಾಮಾನ ಇಲಾಖೆ ಪ್ರಕಾರ ಏಪ್ರಿಲ್‌ನಲ್ಲಿ 41.5 ಮಿ.ಮೀ. ವಾಡಿಕೆ ಮಳೆಯಾಗಿದ್ದು, 3.1 ದಿನ ಮಳೆಯ ದಿನಗಳನ್ನು ನಗರದ ಹೊಂದಿದೆ.
ಎರಡು ತಿಂಗಳಲ್ಲಿ ಶೇ.99 ಕೊರತೆ:
ವಾಡಿಕೆ ಪ್ರಕಾರ ನಗರದಲ್ಲಿ ಮಾರ್ಚ್‌ನಲ್ಲಿ 18.5 ಮಿ.ಮೀ. ಹಾಗೂ ಏಪ್ರಿಲ್‌ನಲ್ಲಿ 41.5 ಮಿ.ಮೀ.ನಷ್ಟು ಸೇರಿದಂತೆ ಎರಡು ತಿಂಗಳಲ್ಲಿ ಒಟ್ಟಾರೆ 54.3 ಮಿ.ಮೀ ಮಳೆಯಾಗಬೇಕು. ಆದರೆ, ಕಳೆದ ಮಾರ್ಚ್‌ನಲ್ಲಿ 0.1 ಮಿ.ಮೀ.ಗಿಂತ ಕಡಿಮೆ ಹಾಗೂ ಏಪ್ರಿಲ್‌ನಲ್ಲಿ ಮಳೆಯಾಗಿಲ್ಲ. ಹೀಗಾಗಿ, ಶೇ.99 ರಷ್ಟು ಮಳೆ ಕೊರತೆ ಉಂಟಾಗಿದೆ.3 ಬಾರಿ 38 ಡಿಗ್ರಿಗಿಂತ ಹೆಚ್ಚು ಬಿಸಿಲು
ಏಪ್ರಿಲ್ 28ರ ಭಾನುವಾರ 38.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ 13 ವರ್ಷದಲ್ಲಿ ಏಪ್ರಿಲ್‌ನಲ್ಲಿ ಎರಡನೇ ಅತಿ ಹೆಚ್ಚು ಬಿಸಿಲು ದಾಖಲಾಗಿದೆ. ಏ.19 ಹಾಗೂ ಏ.27ರಂದು 38 ಡಿಗ್ರಿ ಸೆಲ್ಸಿಯಸ್ ಸೇರಿದಂತೆ ಒಟ್ಟು ಮೂರು ಬಾರಿ 38 ಡಿಗ್ರಿ ಸೆಲ್ಸಿಯಸ್ ಹಾಗೂ ಅದಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಹಲವು ದಿನ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಲು ವರದಿಯಾಗಿದೆ.ದಾಖಲೆಯ ಮಳೆ ಇತಿಹಾಸವೂ ಇದೆ!
ಮಳೆ ಕಾಣದ ಏಪ್ರಿಲನ್ನು ಬೆಂಗಳೂರು ಈ ಬಾರಿ ಕಂಡಿದೆ. ಆದರೆ, ಇದೇ ಏಪ್ರಿಲ್ ತಿಂಗಳಿನಲ್ಲಿ ದಾಖಲೆಯ ಪ್ರಮಾಣದ ಹಾಗೂ ತಿಂಗಳ ವಾಡಿಕೆ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ಮಳೆಯನ್ನು ಕೇವಲ 24 ಗಂಟೆಯಲ್ಲಿ ಸುರಿದ ಇತಿಹಾಸವೂ ಇದೆ. 2001ರ ಏಪ್ರಿಲ್ 19ರಂದು ಕೇವಲ 24 ಗಂಟೆಯಲ್ಲಿ 108.6 ಮಿ.ಮೀ. ಮಳೆ ಸುರಿದಿತ್ತು. ಅದೇ ವರ್ಷ ಏಪ್ರಿಲ್ ಇಡೀ ತಿಂಗಳಿನಲ್ಲಿ 323 ಮಿ.ಮೀ. ಮಳೆಯಾಗಿತ್ತು. ಇದು ನಗರದಲ್ಲಿ ಏಪ್ರಿಲ್‌ನಲ್ಲಿ ಸುರಿದ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ.ಕಾರಣಗಳೇನು?
*ಮಳೆಗೆ ಪೂರಕವಾದ ವಾತಾವರಣ ಇಲ್ಲದಿರುವುದು.
*ವಾತಾವರಣದಲ್ಲಿ ತೇವಾಂಶ ಕೊರತೆ.
*ಸಮುದ್ರ ಕಡೆಯಿಂದ ತೇವಾಂಶ ಭರಿತ ಗಾಳಿ ಬೀಸುತ್ತಿಲ್ಲ.
*ಸುಳಿ ಗಾಳಿ ಹಾಗೂ ಟ್ರಫ್ ರಚನೆ ಇಲ್ಲ.---
ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಮಳೆ ಬಂದಿಲ್ಲ. ಸ್ಥಳೀಯ ಮಟ್ಟದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಪರಿಣಾಮದಿಂದ ಈ ರೀತಿ ಉಂಟಾಗಿದೆ. ಬೆಂಗಳೂರಿನಲ್ಲಿ ಈ ರೀತಿ ವಾತಾವಾರಣ ಉಂಟಾಗಿರುವುದು ಇದೇ ಮೊದಲಾಗಿದೆ.
-ಶ್ರೀನಿವಾಸ್ ರೆಡ್ಡಿ, ಹವಾಮಾನ ತಜ್ಞ.