ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಆಕಸ್ಮಿಕವಾಗಿ ಸೋರಿಕೆಯಾಗಿದ್ದಲ್ಲ. ಅವುಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡಲಾಗಿದೆ. ಹಾಗಾಗಿ ಮೊದಲು ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಒತ್ತಾಯಿಸಿದರು.

ಉಡುಪಿ: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಆಕಸ್ಮಿಕವಾಗಿ ಸೋರಿಕೆಯಾಗಿದ್ದಲ್ಲ. ಅವುಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡಲಾಗಿದೆ. ಹಾಗಾಗಿ ಮೊದಲು ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಒತ್ತಾಯಿಸಿದರು.ಶನಿವಾರ ನಗರದ ಜೋಡುಕಟ್ಟೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ, ಎಸ್‌ಐಆರ್, ನೀಟ್ ಪ್ರಶ್ನೆಪತ್ರಿಕೆ ಹಗರಣ ಮತ್ತು ಬೆಲೆ ಏರಿಕೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಮರು ಪರೀಕ್ಷೆ ಮಾಡುವ ಮೂಲಕ ವಿದ್ಯಾರ್ಥಿಗಳ ಮೇಲೆ ಹೊರೆ ಏರಿಸುವುದು ಸರಿಯಲ್ಲ. ಮುಂದಿನ ವರ್ಷದಿಂದ ರಾಜ್ಯ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು. ಕಚ್ಚಾತೈಲಗಳ ಬೆಲೆ ಏರಿಕೆಯಿಂದ ಇಂಧನ ಬೆಲೆ ಏರಿಕೆಯಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ನೆಪ ಹೇಳುತ್ತಿದೆ. ಕಚ್ಛಾತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ತಪ್ಪು ನೀತಿಗಳೇ ಕಾರಣ ಎಂದ ಜಯಪ್ರಕಾಶ್ ಹೆಗ್ಡೆ, ತಪ್ಪು ವಿದೇಶಿ ನೀತಿಯನ್ನು ಜನಸಾಮಾನ್ಯರ ಮೇಲೆ ಹೊರಿಸಬೇಡಿ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯನ್ನು ಕಲಿಯಿರಿ. ಆ ಮೂಲಕ ದೇಶದ ಜನತೆಯನ್ನು ಸಂಕಷ್ಟದಿಂದ ಪಾರು ಮಾಡಿ ಎಂದರು.

ಎಸ್ಐಆರ್ ಬಗ್ಗೆ ಮಾತನಾಡಿದ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕೇಂದ್ರ ಸರ್ಕಾರವು ಮತದಾನದ ಹಕ್ಕನ್ನು ಕಸಿಸುವ ಪ್ರಯತ್ನವನ್ನು ಮಾಡಲು ಹೊರಟಿದೆ. ಬಿಹಾರದಲ್ಲಿ 35 ಲಕ್ಷ ಮತಗಳು ಕಾಣೆಯಾಗಿವೆ. ಆದ್ದರಿಂದ ಕೇಂದ್ರ ಸರ್ಕಾರ ಈ ನೂತನ ಮತದಾನ ಪರಿಷ್ಕರಣೆಯ ನೆಪದಲ್ಲಿ ಎಸ್‌ಐಆರ್‌ನ್ನು ವಿರೋಧಿಸಬೇಕಾಗಿದೆ ಎಂದು ಕರೆ ನೀಡಿದರು.

ಇದಕ್ಕೆ ಮೊದಲು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಿಂದ ಆರಂಭವಾದ ಕಾಲ್ನಡಿಗೆ ಮೆರವಣಿಗೆ ಬ್ರಹ್ಮಗಿರಿ ಸರ್ಕಲ್ ಮೂಲಕ ಜೋಡುಕಟ್ಟೆಯವರೆಗೆ ಸಾಗಿತು. ಕೆಲ ಕಾರ್ಯಕರ್ತರು ಸೈಕಲ್‌ಗಳಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಗಮನ ಸೆಳೆದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಮುಖರಾದ ಮಾಜಿ ಶಾಸಕ ಗೋಪಾಲ ಪೂಜಾರಿ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುನಿಯಾಲು ಉದಯಕುಮಾರ್ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಳೆಬೈಲ್, ಸುರೇಶ್ ಶೆಟ್ಟಿ ಬನ್ನಂಜೆ, ದಿನೇಶ ಪುತ್ರನ್, ಹರಿಪ್ರಸಾದ್ ರೈ, ಕೀರ್ತಿ ಶೆಟ್ಟಿ, ಮಹಾಬಲ ಕುಂದರ್, ಮಂಜುನಾಥ್ ಪೂಜಾರಿ, ಸೌರಭ್ ಬಲ್ಲಾಳ್ ಮೊದಲಾದವರು ಭಾಗವಹಿಸಿದ್ದರು.