ಮೊದಲ ಬಾರಿಗೆ ಮಲೆನಾಡಿನಲ್ಲಿ ಕಂಬಳ ಆಯೋಜನೆ: ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ

| Published : Feb 07 2025, 12:30 AM IST

ಮೊದಲ ಬಾರಿಗೆ ಮಲೆನಾಡಿನಲ್ಲಿ ಕಂಬಳ ಆಯೋಜನೆ: ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಇದೇ ಮೊದಲ ಬಾರಿಗೆ ಮಲೆನಾಡಿನಲ್ಲಿ ಕಂಬಳ ಆಯೋಜನೆ ಮಾಡಲಾಗಿದ್ದು, ನಗರದ ಹೊರವಲಯದಲ್ಲಿರುವ ಮಾಚೇನಹಳ್ಳಿಯ ತುಂಗಭದ್ರಾ ಜಂಕ್ಷನ್‌ನಲ್ಲಿ (ಜಯಲಕ್ಷ್ಮೀ ಪೆಟ್ರೋಲ್ ಬಂಕ್ ಹಿಂಭಾಗ) 16 ಎಕರೆ ಜಾಗದಲ್ಲಿ ಏ.19, 20ಕ್ಕೆ ತುಂಗಭದ್ರಾ ಜೋಡುಕರೆ ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ತಿಳಿಸಿದರು.

ಏ.19, 20ಕ್ಕೆ ತುಂಗಭದ್ರಾ ಜೋಡುಕರೆಯಲ್ಲಿ ಸ್ಪರ್ಧೆ । ಫೆ.10ರಂದು ಆಚೇನಹಳ್ಳಿಯಲ್ಲಿ ಭೂಮಿಪೂಜೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇದೇ ಮೊದಲ ಬಾರಿಗೆ ಮಲೆನಾಡಿನಲ್ಲಿ ಕಂಬಳ ಆಯೋಜನೆ ಮಾಡಲಾಗಿದ್ದು, ನಗರದ ಹೊರವಲಯದಲ್ಲಿರುವ ಮಾಚೇನಹಳ್ಳಿಯ ತುಂಗಭದ್ರಾ ಜಂಕ್ಷನ್‌ನಲ್ಲಿ (ಜಯಲಕ್ಷ್ಮೀ ಪೆಟ್ರೋಲ್ ಬಂಕ್ ಹಿಂಭಾಗ) 16 ಎಕರೆ ಜಾಗದಲ್ಲಿ ಏ.19, 20ಕ್ಕೆ ತುಂಗಭದ್ರಾ ಜೋಡುಕರೆ ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ತಿಳಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಮುಕುಟಕ್ಕೆ ತುಳುನಾಡ ವೀರ ಜಾನಪದ ಕ್ರೀಡೆ, ಕಂಬಳದ ಗರಿ ಸೇರ್ಪಡೆಗೊಳ್ಳಲಿದೆ. ಇದು ಕಂಬಳದ ಸೀಜನ್‌ನ ಕೊನೆಯ ಕಂಬಳವಾಗಿದ್ದು, ಫೆ.10ರಂದು ಮಧ್ಯಾಹ್ನ 3ಕ್ಕೆ ಮಾಚೇನಹಳ್ಳಿಯಲ್ಲಿ ಕ್ರೀಡೆಗೆ ಭೂಮಿಪೂಜೆ ಸಮಾರಂಭ ನಡೆಯಲಿದೆ ಎಂದರು.

ಇದೇ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಂಬಳದ ಚಿಹ್ನೆ, ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಅಧಿಕೃತವಾಗಿ ಬಿಡುಗಡೆಗೊಳ್ಳಿಸಲಾಗುವುದು. ಮಲೆನಾಡು ತುಂಗಭದ್ರ ಜೋಡುಕರೆ ಕಂಬಳದಲ್ಲಿ ನಮ್ಮ ಸಂಪ್ರದಾಯ, ಸಂಸ್ಕೃತಿ, ಗ್ರಾಮೀಣ ಸೊಗಡಿನ ಕಲೆ ಹಾಗೂ ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುವ ಅಭೂತಪೂರ್ವ ಸಂಗಮಗಳ ಸಮಾಗಮವಾಗಲಿದ್ದು, ಈ ಐತಿಹಾಸಿಕ ಕ್ಷಣದ ಭೂಮಿ ಪೂಜೆಗೆ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಮುಖರಾದ ಭಾಸ್ಕರ್ ಕೋಟ್ಯಾನ್, ಸುಕುಮಾರ್ ಶೆಟ್ಟಿ, ಶ್ರೀಕಾಂತ್ ಭಟ್ ನಂದಳಿಕೆ, ಮೋಹನ್ ಆಳ್ವಾ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.

ಕೆ.ಈ.ಕಾಂತೇಶ್ ಮಾತನಾಡಿ, ಈ ಕಾರ್ಯಕ್ರಮಕ್ಕೆ 8 ರಿಂದ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಏ.19ರಂದು ಬೆಳಗ್ಗೆ 9 ರಿಂದ ಏ.20ರಂದು ಸಂಜೆ 5 ಗಂಟೆಯವರೆಗೆ ನಿರಂತರವಾಗಿ ಈ ಕಂಬಳ ನಡೆಯಲಿದೆ. ಸುಮಾರು 100ಕ್ಕೂ ಹೆಚ್ಚು ಪ್ರಶಸ್ತಿ ವಿಜೇತ ಕಂಬಳದ ಜೋಡಿಗಳು ಭಾಗವಹಿಸಲಿವೆ. ಇದಕ್ಕಾಗಿ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗುವುದು. 250ಕ್ಕೂ ತುಳುನಾಡಿನ ಸಂಸ್ಕೃತಿ ಸಾರುವ ಸ್ಟಾಲ್‌ಗಳು ಇರಲಿವೆ ಎಂದರು.

ಕಂಬಳದ ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ತವರೂರಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಜಿಲ್ಲೆಯ ಜನರಿಗೆ ಒಂದು ವಿಶೇಷ ಅವಕಾಶವಾಗಿದೆ. ಸಾರ್ವಜನಿಕರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದರು.

ಸಮಿತಿಯ ಉಪಾಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಿರಣ್‌ಕುಮಾರ್, ಕಾರ್ಯದರ್ಶಿ ಶಶಿಧರ್ ಶೆಟ್ಟಿ ಪ್ರಮುಖರಾದ ಹರಿಪ್ರ ಸಾದ್ ಶೆಟ್ಟಿ, ಈ.ವಿಶ್ವಾಸ್, ಕುಬೇರಪ್ಪ, ಶಿವಾಜಿ, ರಾಜಣ್ಣ, ಚಿದಾನಂದ್, ಶ್ರೀಕಾಂತ್ ಇದ್ದರು.