ಶೃಂಗೇರಿಯಲ್ಲಿ 19ರಂದು ಪ್ರಥಮ ಜಿಲ್ಲಾ ಕನ್ನಡ ಜಾನಪದ ಸಮ್ಮೇಳನ: ಓಣಿತೋಟ ರತ್ನಾಕರ್

| Published : Jan 06 2025, 01:01 AM IST

ಶೃಂಗೇರಿಯಲ್ಲಿ 19ರಂದು ಪ್ರಥಮ ಜಿಲ್ಲಾ ಕನ್ನಡ ಜಾನಪದ ಸಮ್ಮೇಳನ: ಓಣಿತೋಟ ರತ್ನಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಇದೇ ಜನವರಿ 19ರ ಭಾನುವಾರ ಮೆಣಸೆ ಸರ್ಕಾರಿ ಶಾಸಕರ ಮಾದರಿ ಶಾಲಾವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಓಣಿತೋಟ ರತ್ನಾಕರ್ ತಿಳಿಸಿದ್ದಾರೆ.

ಶೃಂಗೇರಿ ಪಟ್ಟಣದ ಅದ್ವೈತ ಲ್ಯಾನ್ಸರ್ ಸಭಾಂಗಣದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಇದೇ ಜನವರಿ 19ರ ಭಾನುವಾರ ಮೆಣಸೆ ಸರ್ಕಾರಿ ಶಾಸಕರ ಮಾದರಿ ಶಾಲಾವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಓಣಿತೋಟ ರತ್ನಾಕರ್ ತಿಳಿಸಿದ್ದಾರೆ.

ಪಟ್ಟಣದ ಅದ್ವೈತ ಲ್ಯಾನ್ಸರ್ ಸಭಾಂಗಣದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಸಭಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ಜಾನಪದ ಗೋಷ್ಠಿ, ಜಿಲ್ಲಾ ಮಟ್ಟದ ಜಾನಪದ ಕಲಾಪ್ರದರ್ಶನ, ಜಾನಪದ ಬಹಿರಂಗ ಅಧಿವೇಶನ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಶ್ರೀಮಠದ ಅಧಿಕಾರಿ ಕೃಷ್ಣಮೂರ್ತಿ ಭಟ್ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ಅಧ್ಯಕ್ಷತೆ ವಹಿಸಲಿದ್ದಾರೆ.

12ರಿಂದ ಜಾನಪದ ಗೋಷ್ಠಿಗಳು ನಡೆಯಲಿದ್ದು ರಂಗೋಲಿ ಪರಿಸರ ಪ್ರಜ್ಞೆ ಕುರಿತು ಬೆಂಗಳೂರಿನ ಜಾನಪದ ವಿದ್ವಾಂಸ ಡಾ.ಭಾರತಿ ಮರವಂತೆ, ಮಲೆನಾಡಿನ ಜಾನಪದ ಕಲೆಗಳು ಎಂಬ ವಿಷಯದ ಕುರಿತು, ನ್ಯಾಯವಾದಿ, ಸಾಹಿತಿ, ಚಿಂತಕ ಸುಧೀರ್ ಕುಮಾರ್ ಮುರೋಳಿ, ಮಹಿಳಾ ಜಾನಪದ ಎಂಬ ವಿಷಯದ ಕುರಿತು ಎಸ್.ಎನ್.ಚಂದ್ರಕಲಾ ಉಪನ್ಯಾಸ ನೀಡಲಿದ್ದಾರೆ.

ಮದ್ಯಾಹ್ನ 2 ರಿಂದ ಜಿಲ್ಲಾಮಟ್ಟದ ಜಾನಪದ ಕಲಾಪ್ರದರ್ಶನ ನಡೆಯಲಿದೆ. ಭಜನೆ, ಜಾನಪದ ಗೀತೆ,ಜಾನಪದ ನೃತ್ಯ, ಗೀಗಿ ಪದ, ಸುಗ್ಗಿ ಹಾಡು, ಸೋಬಾನೆ ಪದ, ರಾಗಿ ಬೀಸುವ ಹಾಡು, ಲಂಬಾಣಿ ನೃತ್ಯ, ಜಾನಪದ ಪೂಜಾ ಕುಣಿತ, ಕೋಲಾಟ, ವೀರಗಾಸೆ, ಕೋಲಾಟ, ಮರಗಾಲು ಕುಣಿತ ನಡೆಯಲಿದೆ.

ಸಂಜೆ 4 ಗಂಟೆಗೆ ಜಾನಪದ ಬಹಿರಂಗ ಅಧಿವೇಶನ ನಡೆಯಲಿದೆ. ಕಳಸ ತಾಲೂಕು ಜಾನಪದ ಪರಿಷತ್ ಅಧ್ಯಕ್ಷೆ ಸುಜಯ ಸದಾನಂದ ವಿಷಯ ಮಂಡಿಸಲಿದ್ದಾರೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕೊಪ್ಪ ಜಾನಪದ ಕಲಾವಿದ ಬಲಗಾರು ಗಣೇಶ್, ಕಡೂರು ವೀರಗಾಸೆ ಕಲಾವಿದ ನವೀನ್ ಕುಮಾರ್ ಅರೆಹಳಿ ಯವರಿಗೆ ಜಾನಪದ ಪ್ರಪಂಚ ಪ್ರಶಸ್ತಿ ಪ್ರಧಾನ ನಡೆಯಲಿದೆ. ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ದೀಪಾ ಹೀರೆಗುತ್ತಿ ಕಲಾವಿದರಿಗೆ ಅಭಿನಂದನಾ ನುಡಿ ನೆರವೇರಿಸಲಿದ್ದಾರೆ.

ಸಂಜೆ 7 ಗಂಟೆಯಿಂದ ಜಾನಪದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಮೂಲ ಜಾನಪದ ಕಲೆ ಅಂಟಿಕೆ ಪಿಂಟಿಕೆ ಪ್ರದರ್ಶನ, ಕೊಗ್ರೆ, ನಾರ್ವೆ, ಶ್ರೀ ಚಂಡಿಕೇಶ್ವರಿ ಅಂಟಿಕೆ ಪಿಂಟಿಕೆ ತಂಡ, ಶೃಂಗೇರಿ ತಾಲೂಕು ಅಂಟಿಕೆ ಪಿಂಟಿಕೆ ತಂಡದಿಂದ ಅಂಟಿಕೆ ಪಿಂಟಿಕೆ, ಅಕ್ಷರ ಮ್ಯೂಸಿಕಲ್ಸ್ ತಂಡದಿಂದ ಸ್ಯಾಕ್ಯ್ಸೋ ಫೋನ್ ವಾದನ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆಶೀಶ್ ದೇವಾಡಿಗ, ಸ್ವಾಗತ ಸಮಿತಿ ಅಧ್ಯಕ್ಷ ಎ.ಎಸ್. ನಯನಾ, ಶಿವಾನಂದರಾವ್ ಹೆಗ್ಗದ್ದೆ, ನಾಗೇಶ್ ಕಾಮತ್, ಟಿ.ಟಿ.ಕಳಸಪ್ಪ ಮತ್ತಿತರರು ಇದ್ದರು.

5 ಶ್ರೀ ಚಿತ್ರ 2-

ಶೃಂಗೇರಿ ಪಟ್ಟಣದ ಅದ್ವೈತ ಲ್ಯಾನ್ಸರ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ಬಿಡುಗಡೆ ಗೊಳಿಸಿದರು. ನಯನಾ,ಆಶೀಶ್ ದೇವಾಡಿಗ, ಕಳಸಪ್ಪ ಮತ್ತಿತರರು ಇದ್ದರು.