ಸಾರಾಂಶ
ರಾಜ್ಯದ ಜನರಿಗೆ ಶಾಂತಿ ಸುವ್ಯವಸ್ಥೆ ಜೊತೆಗೆ ನೆಮ್ಮದಿಯನ್ನು ಒದಗಿಸುವುದು ಸರ್ಕಾರ ಆದ್ಯ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿಯೇ ಆಡಳಿತ ನಡೆಸಲಾಗುತ್ತಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ರಾಯಚೂರು: ರಾಜ್ಯದ ಜನರಿಗೆ ಶಾಂತಿ ಸುವ್ಯವಸ್ಥೆ ಜೊತೆಗೆ ನೆಮ್ಮದಿಯನ್ನು ಒದಗಿಸುವುದು ಸರ್ಕಾರ ಆದ್ಯ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿಯೇ ಆಡಳಿತ ನಡೆಸಲಾಗುತ್ತಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಎಲ್ಲ ಕಾಲದಲ್ಲಿ ಅಪರಾಧಗಳು ನಡೆಯುತ್ತಲೆಯೇ ಇರುತ್ತವೆ ಆದರೆ ಸರ್ಕಾರಗಳು ಸದೃಢವಾಗಿದ್ದಾಗ ಮಾತ್ರ ಘಟನೆಗಳನ್ನು ತಡೆಗಟ್ಟಲುಸ ಸಾಧ್ಯವಾಗುತ್ತದೆ. ಇಲ್ಲದೇ ಹೋದರೇ ಅಧಿಕಾರದಲ್ಲಿ ಹಿಡಿತ ತಪ್ಪಿ ಅಪರಾಧಗಳ ಸಂಖ್ಯೆ ಸಹ ಹೆಚ್ಚುತ್ತವೆ ಆದರೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸದೃಢ ಸರ್ಕಾರವನ್ನು ನಡೆಸುತ್ತಿದ್ದು, ಅಂತಹ ಘಟನೆಗಳಿಗೆ ಆಸ್ಪದ ಕೊಡುವುದಿಲ್ಲ ಎಂದರು.ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ. ಆದರೆ ಬಿಜೆಪಿಗರು ಈ ಘಟನೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಬಗ್ಗೆ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಅವರ ಅವಧಿಯಲ್ಲಿ ಆರು ಬಾಂಬ್ ಸ್ಪೋಟದ ಪ್ರಕರಣಗಳಾಗಿದ್ದು ಈ ಕುರಿತು ಯಾರು ಧ್ವನಿ ಎತ್ತುವುದಿಲ್ಲ ಎಂದು ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಯಾರೇ ಘೋಷಣೆ ಹಾಕಿದರೂ ತಪ್ಪೇ. ಅಂತವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿಯಲ್ಲಿ ಅವಮಾನ ಮಾಡಿದ್ದಾರೆ ಎಂದು ನಮ್ಮ ಪಕ್ಷಕ್ಕೆ ಬಂದು ಮತ್ತೆ ಹಿಂತಿರುಗಿ ಹೋಗಿದ್ದು, ಇಂತವರಿಗೆ ಕಾಂಗ್ರೆಸ್ ಕುರಿತು ಟೀಕೆ ಮಾಡುವ ಯಾವ ನೈತಿಕತೆಯೂ ಇಲ್ಲ ಎಂದು ಹೇಳಿದರು.ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಪಕ್ಷ ಅಗತ್ಯ ಕ್ರಮ ತೆಗೆದುಕೊಂಡಿದೆ. ಬಿಜೆಪಿ ಪಕ್ಷದೊಂದಿಗೆ ಸೆಣಸಲು ಹಾಲಿ ಶಾಸಕರನ್ನು ಸ್ಪರ್ಧಿಗೆ ಇಳಿಸಿದರೂ ತಪ್ಪೇನಿದೆ ಎಂದು ಪ್ರಶ್ನಿಸಿದರು.