ವಿಧಾನ ಸೌಧದಲ್ಲಿ ಪ್ರಥಮ ಬಾರಿಗೆ ಪುಸ್ತಕ - ಸಾಹಿತ್ಯ ಉತ್ಸವ : ಸ್ಪೀಕರ್‌ ಯು. ಟಿ. ಖಾದರ್‌

| N/A | Published : Feb 04 2025, 12:32 AM IST / Updated: Feb 04 2025, 12:21 PM IST

UT Khader
ವಿಧಾನ ಸೌಧದಲ್ಲಿ ಪ್ರಥಮ ಬಾರಿಗೆ ಪುಸ್ತಕ - ಸಾಹಿತ್ಯ ಉತ್ಸವ : ಸ್ಪೀಕರ್‌ ಯು. ಟಿ. ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ವಿಧಾನಸೌಧದ ಆವರಣದೊಳಗೆ ಇದೇ ಮೊದಲ ಬಾರಿಗೆ ಪುಸ್ತಕ ಮತ್ತು ಸಾಹಿತ್ಯೋತ್ಸವವನ್ನು ಫೆ.27ರಿಂದ ಮಾರ್ಚ್‌ 3ರವರೆಗೆ ಆಯೋಜಿಸಲಾಗಿದೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

 ಮಂಗಳೂರು : ಬೆಂಗಳೂರಿನ ವಿಧಾನಸೌಧದ ಆವರಣದೊಳಗೆ ಇದೇ ಮೊದಲ ಬಾರಿಗೆ ಪುಸ್ತಕ ಮತ್ತು ಸಾಹಿತ್ಯೋತ್ಸವವನ್ನು ಫೆ.27ರಿಂದ ಮಾರ್ಚ್‌ 3ರವರೆಗೆ ಆಯೋಜಿಸಲಾಗಿದೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿಗಳು, ಬರಹಗಾರರು ಹಾಗೂ ವಿದ್ವಾಂಸರನ್ನು ವಿಧಾನ ಸೌಧಕ್ಕೆ ಹತ್ತಿರವಾಗಿಸುವ ಉದ್ದೇಶದಿಂದ ಈ ಉತ್ಸವ ನಡೆಸಲಾಗುತ್ತಿದೆ. ವಿಧಾನಸೌಧ ಆವರಣ ಸುತ್ತಲೂ ಮಳಿಗೆಗಳು, ವಿವಿಧ ವೇದಿಕೆಗಳು ಬರಲಿವೆ. ಉತ್ಸವದ ಜತೆ ಆಹಾರೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಹೇಳಿದರು.

ಪುಸ್ತಕೋತ್ಸವದಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಶೇ. 80ರಷ್ಟು ಮಳಿಗೆಗಳು ಕನ್ನಡ ಪುಸ್ತಕಗಳಿಗೆ ಮೀಸಲಾದರೆ, ಉಳಿದ ಶೇ.20ರಷ್ಟು ಇತರ ಭಾಷೆಗಳ ಪುಸ್ತಕಗಳಿಗೆ ಅವಕಾಶ ಕಲ್ಪಿಸಲಾಗುವುದು. ಸುಮಾರು 150ಕ್ಕೂ ಅಧಿಕ ಮಳಿಗೆಗಳು ಇರಲಿವೆ ಎಂದು ಖಾದರ್‌ ತಿಳಿಸಿದರು.ಶಾಸಕರಿಗೆ ಪುಸ್ತಕ ಖರೀದಿ ಅವಕಾಶ:

ಪ್ರಸ್ತುತ ಶಾಸಕರ ನಿಧಿಯಿಂದ ಪುಸ್ತಕ ಖರೀದಿ ಮಾಡಲು ಅವಕಾಶವಿಲ್ಲ. ಈ ಪುಸ್ತಕೋತ್ಸವ ಜನರಿಗೆ ಉಪಯೋಗವಾಗಬೇಕು ಎನ್ನುವ ಸದುದ್ದೇಶದಿಂದ ಇದೇ ಪ್ರಥಮ ಬಾರಿಗೆ ಶಾಸಕರ ನಿಧಿಯಿಂದ 2-3 ಲಕ್ಷ ರು.ಗಳಷ್ಟು ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಶಾಸಕರು ತಾವು ಖರೀದಿಸಿದ ಪುಸ್ತಕಗಳನ್ನು ತಮ್ಮ ಕ್ಷೇತ್ರದ ಸರ್ಕಾರಿ ಶಾಲೆ, ಕಾಲೇಜುಗಳು, ಗ್ರಂಥಾಲಯಗಳಿಗೆ ನೀಡಬಹುದು ಎಂದರು.

ಸಾಮಾನ್ಯವಾಗಿ ಐಎಎಸ್‌, ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯ ಪುಸ್ತಕಗಳ ಬೆಲೆ ಹೆಚ್ಚಿರುವುದರಿಂದ ಹೆಚ್ಚಿನ ಗ್ರಂಥಾಲಯಗಳಲ್ಲಿ ಇಂಥ ಪುಸ್ತಗಳು ಸಿಗಲ್ಲ. ಶಾಸಕರ ನಿಧಿಯಿಂದ ಇಂಥ ಪುಸ್ತಕಗಳನ್ನು ಖರೀದಿಸಿ ಸ್ಪರ್ಧಾತ್ಮಕ ಪರೀಕ್ಷಾಕಾಂಕ್ಷಿಗಳಿಗೆ ಉಪಯೋಗವಾಗುವಂತೆ ಮಾಡಬಹುದು. ಈ ಕುರಿತು ಶಾಸಕರಿಗೆ ಪತ್ರ ಬರೆಯಲಾಗಿದೆ ಎಂದು ಸ್ಪೀಕರ್‌ ಮಾಹಿತಿ ನೀಡಿದರು.

ಪುಸ್ತಕ ಬಿಡುಗಡೆಗೆ ವೇದಿಕೆ:

ಉತ್ಸವದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಅದಕ್ಕಾಗಿ ಎರಡು ಪ್ರತ್ಯೇಕ ಜಾಗ ನಿಗದಿಪಡಿಸಲಾಗುವುದು. ಜತೆಗೆ ಸಾಹಿತಿಗಳಿಗೆ ತಮ್ಮ ಪುಸ್ತಕಗಳನ್ನು ಬಿಡುಗಡೆಗೊಳಿಸಲು ವೇದಿಕೆ ಒದಗಿಸುತ್ತೇವೆ. ನಾಡಿನ ಅತ್ಯುತ್ತಮ ಸಾಹಿತಿಯೊಬ್ಬರಿಗೆ ಪ್ರಶಸ್ತಿ ನೀಡುವ ಬಗ್ಗೆಯೂ ನಿರ್ಧರಿಸಲಾಗಿದೆ. ಪ್ರತಿದಿನ ಸಂಜೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಎಂದರು.

ಶಾಸಕರಿಗೆ ಈ ಉತ್ಸವದಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಲು ಆಗಲ್ಲ. ಮಾ.3ರಂದು ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಅದೇ ದಿನ ಸಾಹಿತ್ಯೋತ್ಸವ ಸಮಾರೋಪ ದಿನವನ್ನು ನಿಗದಿ ಮಾಡಲಾಗಿದೆ. ಹಾಗಾಗಿ ಶಾಸಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಯು.ಟಿ. ಖಾದರ್‌ ಹೇಳಿದರು. 

ವಿಧಾನ ಸೌಧದೊಳಗೆ ಸ್ಟ್ರೈಟ್‌ ವಿಂಗ್‌ ಮಾತ್ರ!

ಎಡ- ಬಲ ಸಾಹಿತಿಗಳು ಎನ್ನುವ ವರ್ಗೀಕರಣ ಏನಿದ್ದರೂ ವಿಧಾನಸೌಧದ ಹೊರಗಡೆ. ವಿಧಾನಸೌಧದೊಳಗೆ ಲೈಫ್ಟ್‌ ವಿಂಗ್‌, ರೈಟ್‌ ವಿಂಗ್‌ ಎನ್ನುವ ಪ್ರಶ್ನೆಯೇ ಬರಲ್ಲ. ಅಲ್ಲಿರೋದು ಸ್ಟ್ರೈಟ್‌ ವಿಂಗ್‌ ಮಾತ್ರ ಎಂದು ಯು.ಟಿ. ಖಾದರ್‌ ಚಟಾಕಿ ಹಾರಿಸಿದರು.

 ಉತ್ಸವದ ಲೋಗೋ, ಹೆಸರು ಸೂಚನೆಗೆ ಆಹ್ವಾನಸಾಹಿತ್ಯೋತ್ಸವಕ್ಕೆ ಸಾಹಿತಿಗಳನ್ನು ಒಳಗೊಂಡ ವಿವಿಧ ಸಮಿತಿಗಳು ಅಗತ್ಯ ಸಿದ್ಧತೆ, ರೂಪುರೇಷೆಗಳನ್ನು ಸಿದ್ಧಪಡಿಸಲಿವೆ. ಉತ್ಸವಕ್ಕೆ ಸಾರ್ವಜನಿಕರಿಂದ ಲೋಗೋ ಹಾಗೂ ಉತ್ಸವದ ಹೆಸರು ಸೂಚಿಸಲು ಆಹ್ವಾನ ನೀಡಲಾಗಿದ್ದು, ಆಸಕ್ತರು secy-kla-kar@nic.in ಅಥವಾ ಮೊ. 9448108789 ಸಂಖ್ಯೆಯ ಮೂಲಕ (ವಾಟ್ಸಪ್‌) ಹೆಸರು, ಲೋಗೋ ಸೂಚಿಸಬಹುದು ಎಂದು ಯು.ಟಿ. ಖಾದರ್‌ ತಿಳಿಸಿದರು.