ಒಂದನೇ ತರಗತಿ ಪ್ರವೇಶ ಗೊಂದಲ: ಪೋಷಕರ ಆತಂಕ

| Published : May 03 2024, 01:08 AM IST / Updated: May 03 2024, 01:13 PM IST

ಸಾರಾಂಶ

ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದೊಂದು ರೀತಿಯ ವಯೋಮಿತಿಯನ್ನು ಪೋಷಕರ ಮುಂದಿಡುತ್ತಿರುವುದು ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವ ಪೋಷಕರನ್ನು ಕಂಗೆಡಿಸುವಂತೆ ಮಾಡಿದೆ.

ಮಂಡ್ಯ : ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಪ್ರಸ್ತುತ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಇರಬೇಕಾದ ವಯಸ್ಸಿನ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ಇದು ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯವು 15 .2 .2024 ರಂದು ಹೊರಡಿಸಿರುವ ಆದೇಶದ ಪ್ರಕಾರ ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಜೂ.1 ಕ್ಕೆ 6 ವರ್ಷವಾಗಿರಬೇಕೆಂದು ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಸಮಗ್ರ ಶಿಕ್ಷಣ ಕರ್ನಾಟಕ 27 .4 .2022 ರಂದು 25--26 ನೇ ಸಾಲಿನಿಂದ ಜೂ.1 ಕ್ಕೆ ಕಡ್ಡಾಯವಾಗಿ6 ವರ್ಷ ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಿ ಆದೇಶ ಹೊರಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಈ ಸಾಲಿನಲ್ಲಿ ರಾಜ್ಯಸರ್ಕಾರ 5.5 ವರ್ಷ ಪೂರೈಸಿರುವ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದ್ದರೂ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದೊಂದು ರೀತಿಯ ವಯೋಮಿತಿಯನ್ನು ಪೋಷಕರ ಮುಂದಿಡುತ್ತಿರುವುದು ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವ ಪೋಷಕರನ್ನು ಕಂಗೆಡಿಸುವಂತೆ ಮಾಡಿದೆ.

ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು 5.5 ವರ್ಷಕ್ಕೆ ಪ್ರವೇಶ ನೀಡಿದರೆ ಇನ್ನೂ ಕೆಲವು ಶಾಲೆಗಳು 5.10 ವರ್ಷಗಳನ್ನು ತಾವೇ ನಿಗದಿಪಡಿಸಿಕೊಂಡು ಮಕ್ಕಳನ್ನು ಶಾಲೆಗಳಿಗೆ ದಾಖಲಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಶಾಲೆಗಳ ದಾಖಲಾತಿಯಲ್ಲಿ ಕೇಂದ್ರದ ಆದೇಶವನ್ನು ಪಾಲಿಸಬೇಕೋ, ರಾಜ್ಯಸರ್ಕಾರದ ಆದೇಶ ಪಾಲಿಸುವುದೋ ಅಥವಾ ಖಾಸಗಿ ಶಾಲೆಗಳು ಏಕಪಕ್ಷೀಯವಾಗಿ ರೂಪಿಸಿರುವ ನಿಯಮವನ್ನು ಪಾಲಿಸಬೇಕೋ ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತಿದೆ. ಈ ಗೊಂದಲವನ್ನು ಬಗೆಹರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ದಿವ್ಯಮೌನ ವಹಿಸಿರುವುದು ಬಿಕ್ಕಟ್ಟು ಸೃಷ್ಟಿಯಾಗುವುದಕ್ಕೆ ಮುಖ್ಯ ಕಾರಣವಾಗಿದೆ.

ಐಎಸ್‌ಸಿಇ, ಸಿಬಿಎಸ್‌ಸಿ ಸೇರಿದಂತೆ ಸ್ಟೇಟ್ ಸಿಲಬಸ್‌ನವರಿಗೂ ಒಂದೇ ರೀತಿಯ ನಿಯಮಾವಳಿಗಳು ಅನ್ವಯಿಸುತ್ತವೆಯಾದರೂ ಒಂದೊಂದು ಶಾಲೆಗಳು ಒಂದೊಂದು ರೀತಿಯಲ್ಲಿ ನಿಯಮಾವಳಿಗಳನ್ನು ಪೋಷಕರ ಮುಂದಿಡುತ್ತಿದ್ದಾರೆ. ಇದರಿಂದಾಗಿ ಒಂದು ವರ್ಷ ವ್ಯರ್ಥವಾಗುವ ಭಯ ಪೋಷಕರನ್ನು ಕಾಡಲಾರಂಭಿಸಿದೆ.

ಕೆಲವು ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ವಿಷಯವೇ ಗೊತ್ತಿಲ್ಲ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಇನ್ನೂ ಜಾರಿಯಾಗಿಲ್ಲ. ಈ ನಡುವೆ ಕೇಂದ್ರ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 6 ವರ್ಷ ಪೂರೈಸಿರಬೇಕೆಂದು ಸ್ಪಷ್ಟವಾಗಿ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ರಾಜ್ಯಸರ್ಕಾರ ಈ ಆದೇಶ ೨೦೨೫-೨೬ನೇ ಸಾಲಿನಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಖಾಸಗಿ ಶಾಲೆಗಳೂ ಕೂಡ ಕೇಂದ್ರ ಮತ್ತು ರಾಜ್ಯಸರ್ಕಾರದ ಆದೇಶಗಳಲ್ಲಿ ಯಾವುದನ್ನು ಪಾಲಿಸಬೇಕೆಂಬುದು ತಿಳಿಯದೇ ತಮಗಿಷ್ಟ ಬಂದ ರೀತಿಯಲ್ಲಿ ವಯೋಮಿತಿಯನ್ನು ನಿಗದಿಪಡಿಸಿಕೊಂಡು ಮಕ್ಕಳನ್ನು ದಾಖಲಿಸಿಕೊಳ್ಳುತ್ತಿರುವುದು ಪೋಷಕರಿಗೆ ಮಕ್ಕಳ ದಾಖಲಾತಿಯಲ್ಲಿ ಸ್ಪಷ್ಟತೆಯೇ ಸಿಗದಂತಾಗಿದೆ.

ಇಲ್ಲಿಯವರೆಗೆ ಮಗುವಿಗೆ ೫.೫ ವರ್ಷ ವಯೋಮಿತಿಯನ್ನು ನಿಗದಿಪಡಿಸಿದ್ದರಿಂದ ಮಗುವನ್ನು ಶಾಲೆಗೆ ದಾಖಲಿಸುವ ವಿಚಾರದಲ್ಲಿ ಯಾವುದೇ ಗೊಂದಲಗಳು ಕಂಡುಬರುತ್ತಿರಲಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಇನ್ನು ಮುಂದೆ ಒಂದನೇ ತರಗತಿ ದಾಖಲಾಗುವ ಮಕ್ಕಳಿಗೆ ೬+ ವರ್ಷ ವಯೋಮಿತಿ ಕಡ್ಡಾಯಗೊಳಿಸಿದೆ. ಇದರಲ್ಲಿ ಒಂದು ತಿಂಗಳಲ್ಲ, ಒಂದು ದಿನ ಏರು-ಪೇರಾದರೂ ಮಗುವಿಗೆ ಒಂದನೇ ತರಗತಿಗೆ ದಾಖಲಾತಿ ಸಿಗುವುದಿಲ್ಲ. ಇದರಿಂದ ಒಂದನೇ ತರಗತಿ ದಾಖಲಾಗುವುದು ಒಂದು ವರ್ಷ ವಿಳಂಬವಾಗಲಿದೆ.

ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮ ಸಂಬಂಧ ಒಂದನೇ ತರಗತಿಗೆ ದಾಖಲಾತಿ ಆರಂಭವಾಗಿರುವ ಸಮಯದಲ್ಲಿ ಸರ್ಕಾರಗಳ ಆದೇಶ ಪಾಲನೆ ಕುರಿತಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದಿಷ್ಟ ಸೂಚನೆ ನೀಡಬೇಕಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದು ಕೂಡ ದಾಖಲಾತಿಯಲ್ಲಿ ಆಗುತ್ತಿರುವ ಅವಾಂತರಗಳಿಗೆ ಪ್ರಮುಖ ಕಾರಣವಾಗಿದೆ. ಈಗಲಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಒಂದನೇ ತರಗತಿ ದಾಖಲಾತಿ ವಿಷಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.

ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯಸರ್ಕಾರ ಹೊರಡಿಸಿರುವ ಸುತ್ತೋಲೆ ಆಧರಿಸಿ ಮಕ್ಕಳಿಗೆ ಒಂದನೇ ತರಗತಿಗೆ ದಾಖಲಾತಿ ನೀಡಬೇಕು. ಒಂದೊಂದು ವಯೋಮಿತಿಯನ್ನು ನಿಗದಿಪಡಿಸಿಕೊಳ್ಳುವಂತಿಲ್ಲ. ರಾಜ್ಯಸರ್ಕಾರದ ಸುತ್ತೋಲೆ ಕೇಂದ್ರ ಪಠ್ಯಕ್ರಮಕ್ಕೆ ಅನ್ವಯಿಸುವುದಿಲ್ಲ. ನಾಳೆಯೇ ಈ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆಯುತ್ತೇನೆ.\

ಶಿವರಾಮೇಗೌಡ, ಡಿಡಿಪಿಐ, ಮಂಡ್ಯ

ಕೇಂದ್ರ ಪಠ್ಯಕ್ರಮ ಮತ್ತು ರಾಜ್ಯ ಪಠ್ಯಕ್ರಮಕ್ಕೆ ಒಂದೊಂದು ಶಾಲೆಗಳು ಒಂದೊಂದು ರೀತಿಯ ನಿಯಮ ಅನುಸರಿಸುತ್ತಿವೆ. ಇಲ್ಲಿ ನಿರ್ದಿಷ್ಟವಾಗಿ ಕೇಂದ್ರ-ರಾಜ್ಯ ಸರ್ಕಾರದ ಆದೇಶಗಳು ಪಾಲನೆಯಾಗುತ್ತಿಲ್ಲ. ಇದರಿಂದ ನಮಗೆ ಗೊಂದಲವಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಗೊಂದಲವನ್ನು ಬಗೆಹರಿಸುತ್ತಿಲ್ಲ.

ಕೋಮಲ, ಪೋಷಕರು