ಉಡುಪಿ: ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಇದರ ನೇತೃತ್ವದಲ್ಲಿ ಮರಾಠಿ ಹೋಳಿ ಸಂಭ್ರಮ - 2026 ಕಾರ್ಯಕ್ರಮವನ್ನು ಮಾ. 1ರಂದು ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮುಂಡ್ಮಿನಜೆಡ್ಡು ಆರ್. ಕೆ. ಪಾಟ್ಕರ್ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಡುಪಿ ಜಿಲ್ಲಾ ಸಂಚಾಲಕ ಉಮೇಶ್ ಎ. ನಾಯ್ಕ್ ಚೇರ್ಕಾಡಿ ತಿಳಿಸಿದ್ದಾರೆ.ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಉಡುಪಿ ಜಿಲ್ಲೆಯಲ್ಲಿರುವ ಮರಾಠಿ ಸಮುದಾಯದ ಸುಮಾರು 136 ಹತ್ತರಕಟ್ಟೆ (ಹತ್ತು ಸಮಸ್ತರ ಕಟ್ಟೆ)ಗಳ 3 ಸಾವಿರಕ್ಕೂ ಅಧಿಕ ಮರಾಠಿ ಜನರು ಈ ಹೋಳಿ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಈ 136 ಹತ್ತರಕಟ್ಟೆಗಳ ಸದಸ್ಯರು ತಂತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಹೋಳಿ ಕುಣಿತ ಸಂಭ್ರಮ ನಡೆಸುವುದು ವಾಡಿಕೆ. ಆದರೆ ಈ ಬಾರಿ ಮೊದಲ ಬಾರಿಗೆ ಎಲ್ಲರೂ ಒಗ್ಗಟ್ಟಾಗಿ ಈ ಹೋಳಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಅಧ್ಯಕ್ಷ ಕೆ. ಟಿ. ನಾಯ್ಕ ಚಾಂತಾರು, ಪ್ರಮುಖರಾದ ವೆಂಕಟೇಶ್ ನಾಯ್, ನಾರಾಯಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.