ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆಯ ಪ್ರಥಮ ಹಂತ ಪೂರ್ಣ: ಭರವಸೆ

| Published : Feb 19 2024, 01:32 AM IST

ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆಯ ಪ್ರಥಮ ಹಂತ ಪೂರ್ಣ: ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಒಳಚರಂಡಿ ಯೋಜನೆಯ ಪ್ರಥಮ ಹಂತವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ ಚಾಲನೆಗೆ ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆಯ ಪ್ರಥಮ ಹಂತವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ ಚಾಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಉಮೇಶ್ ಚಂದ್ರ ಭರವಸೆ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಪುರಸಭಾ ಸಭಾಂಗಣದಲ್ಲಿ ಶನಿವಾರ ಮಡಿಕೇರಿ ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಯೋಜನೆ ಬಗ್ಗೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂದರ್ಭ ಈ ಬಗ್ಗೆ ಆವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಈಗಾಗಲೇ ಹಾರಂಗಿ ರಸ್ತೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉಳಿದಂತೆ ಎಲ್ಲ ಕಾಮಗಾರಿಗಳನ್ನು ಇನ್ನು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಪ್ರಥಮ ಹಂತ ಪ್ರಾಯೋಗಿಕವಾಗಿ ಮಾರ್ಚ್ ಅಂತ್ಯದ ಒಳಗೆ ಚಾಲನೆ ದೊರೆಯಲಿದೆ, ದ್ವಿತೀಯ ಹಂತ ಮೇ ತಿಂಗಳ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.ಪುರಸಭೆ ಸದಸ್ಯರಾದ ಜೈ ವರ್ಧನ್, ಡಿ ಕೆ ತಿಮ್ಮಪ್ಪ, ವಿ ಎಸ್ ಆನಂದ್ ಕುಮಾರ್, ಶೇಕ್ ಕಲಿಮುಲ್ಲಾ ಅವರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು.

ತಕ್ಷಣ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಸಾರ್ವಜನಿಕರ ಸಹಾಯದೊಂದಿಗೆ ಆಡಳಿತ ಮಂಡಳಿಯ ಸದಸ್ಯರು ಒಳಚರಂಡಿ ಮಂಡಳಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಅವರು ಮಾತನಾಡಿ ಪತ್ರಿಕೆ ಮಾಧ್ಯಮಗಳಲ್ಲಿ ಒಳಚರಂಡಿ ಯೋಜನೆಯ ವೈಫಲ್ಯತೆ ಮತ್ತು ಅನಾಹುತಗಳ ಬಗ್ಗೆ ಆಗಾಗ್ಗೆ ವರದಿ ಬರುತ್ತಿದ್ದು ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಮಡಿಕೇರಿ ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಇದುವರೆಗೆ ಆಗಿರುವುದರ ಬಗ್ಗೆ ಚರ್ಚೆ ಬಿಟ್ಟು ಮುಂದಿನ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ಕಾಮಗಾರಿ ಬಗ್ಗೆ ತನಿಖೆ ನಡೆಸಲು ಸಮಿತಿ ನೇಮಿಸಲಾಗುವುದು ಎಂದು ಹೇಳಿದರು.

ಸಾಮಾನ್ಯ ಸಭೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬಗ್ಗೆ, ಕುಶಾಲನಗರ ಪುರಸಭೆಗೆ ಸೇರಿದ ಹಳೆ ಸಂತೆ ಮೈದಾನದಲ್ಲಿರುವ ಕುರಿ, ಕೋಳಿ ಹಸಿಮೀನು ಮಾರಾಟ ಮಳಿಗೆಗಳ ಹರಾಜು ನಡೆಸುವ ಬಗ್ಗೆ ಚರ್ಚಿಸಲಾಯಿತು.

ಕುಶಾಲನಗರ ಪುರಸಭೆ ವ್ಯಾಪ್ತಿಗೆ ಸೇರಿದ ಗಾಂಧಿ ಬಸವನಹಳ್ಳಿ ಗ್ರಾಮದಲ್ಲಿರುವ ಕಂಡ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಮಾಡಲು ಟೆಂಡರ್ ಪ್ರಕ್ರಿಯೆ ಬಗ್ಗೆ ಸಭೆ ಚರ್ಚೆ ನಡೆಸಿತು.

ಕುಶಾಲನಗರದಲ್ಲಿ ಕಾವೇರಿ ಉತ್ಸವವನ್ನು ಅದ್ದೂರಿ ಯಾಗಿ ಆಚರಿಸುವ ನಿಟ್ಟಿನಲ್ಲಿ ಸಭೆಯ ಗಮನಕ್ಕೆ ತಂದ ಸದಸ್ಯರಾದ ಜೈ ವರ್ಧನ ಕಾವೇರಿ ನೀರಾವರಿ ನಿಗಮದಿಂದ ಈ ಹಿಂದೆ 25 ಲಕ್ಷ ರು. ವೆಚ್ಚದಲ್ಲಿ ಕಾವೇರಿ ನದಿ ಉತ್ಸವ ನಡೆಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ಉತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸರ್ವಾನುಮತದಿಂದ ಒಪ್ಪಿಗೆಯನ್ನು ಸಭೆ ನೀಡಿತು.

ಹಿಂದಿನ ಸಾಮಾನ್ಯ ಸಭೆಯ ನಡವಳಿಗಳನ್ನು ಓದಿ ಅಂಗೀಕರಿಸುವ ನಿಟ್ಟಿನಲ್ಲಿ ಸದಸ್ಯರು ಚರ್ಚಿಸಿದರು.

ಸದಸ್ಯರಾದ ಪ್ರಮೋದ್ ಮುತ್ತಪ್ಪ, ಎಂ. ಬಿ. ಸುರೇಶ ಕೆ ಆರ್ ರೇಣುಕಾ ಮತ್ತಿತರರು ಮಾತನಾಡಿ ಸಭೆಯ ನಡವಳಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ ಬಡಾವಣೆಗಳ ರಸ್ತೆಯಾಗಿ ಅಗಲೀಕರಣಗೊಂಡಿದ್ದರೂ ವಿದ್ಯುತ್ ಇಲಾಖೆ ಕಂಬಗಳನ್ನು ಇನ್ನು ಸ್ಥಳಾಂತರಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಮಳೆಗಾಲಕ್ಕೆ ಮುನ್ನ ಈ ಕೆಲಸ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಆನಂದ್, ಸದಸ್ಯರಾದ ಶೇಕ್ ಕಲಿ ಮುಲ್ಲಾ ಪುಟ್ಟಲಕ್ಷ್ಮಿ ಪ್ರಮೋದ್ ಜೈ ವರ್ಧನ್ ಎಂ ಬಿ ಸುರೇಶ್ ಆನಂದಕುಮಾರ್ ಜಯಲಕ್ಷ್ಮಿ ಜಯ ಲಕ್ಷ್ಮಮ್ಮ ಶೈಲ ಕೃಷ್ಣಪ್ಪ ಸುಂದರೇಶ್ ರೇಣುಕಾ ಬಿ ಎಲ್ ಜಗದೀಶ್ ಮತ್ತು ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್, ಇಂಜಿನಿಯರ್ ಗಂಗಾರಾಮ್ ಅಧಿಕಾರಿಗಳು ಸಿಬ್ಬಂದಿ ಇದ್ದರು.