ಸಾರಾಂಶ
ಹಾಸನ : ಶ್ರವಣಬೆಳಗೊಳದ ಶ್ರೀ ಕ್ಷೇತ್ರ ಜೈನ ಮಠಕ್ಕೆ ನೂತನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು.
ಹಾಸನದಿಂದ ಶ್ರವಣಬೆಳಗೊಳಕ್ಕೆ ಸಂಸದರು ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಜೈಕಾರ ಹಾಕುವುದರ ಮೂಲಕ ಸಂಭ್ರಮಿಸಿದರು. ಇದೇ ವೇಳೆ ಜೈನ ಮಠಕ್ಕೆ ಆಗಮಿಸುತ್ತಿದ್ದಂತೆ ಮಂಗಳವಾದ್ಯ ಗೋಷ್ಠಿಗಳ ನಡುವೆ ಸಂಸದರನ್ನು ಕೈ ಕಾರ್ಯಕರ್ತರು ಬರಮಾಡಿಕೊಂಡರು.
ಬಳಿಕ ಕೃಷಿ ದೇವಿಗೆ ಪೂಜೆ ಸಲ್ಲಿಸಿ, ಮಠದ ಪೀಠಾಧ್ಯಕ್ಷರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್, ಕೆಲಕಾಲ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದರು. ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಶ್ರೇಯಸ್ ಪಟೇಲ್ ಮಾಧ್ಯಮಗಳೊಂದಿಗೆ ಔಪಚಾರಿಕವಾಗಿ ಮಾತನಾಡಿ, ಮೊದಲ ಬಾರಿಗೆ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ.
ನನ್ನ ಕಾರ್ಯಕರ್ತರಿಗೆ ಮತ್ತು ನನ್ನನ್ನು ಇಷ್ಟು ಅಂತರದಿಂದ ಗೆಲುವು ತಂದುಕೊಟ್ಟ ಕ್ಷೇತ್ರದ ಎಲ್ಲ ಮತದಾರರಿಗೂ ನಾನು ಚಿರಋಣಿಯಾಗಿರುತ್ತೇನೆ. ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗೆ ಸದಾ ನಾನು ಮುಂಚೂಣಿಯಲ್ಲಿದ್ದು, ಸರ್ಕಾರದಿಂದ ಸಿಗುವ ಅನುದಾನದಿಂದ ಕ್ಷೇತ್ರವನ್ನು ಅಭಿವೃದ್ಧಿಯನ್ನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಬರುವ ಚಿಕ್ಕಬೆಟ್ಟ ಮಹೋತ್ಸವದ ಅಂಗವಾಗಿ ಶ್ರೀಗಳು ಕೆಲ ಹೊತ್ತು ನೂತನ ಸಂಸದರ ಜೊತೆ ಮಾತುಕತೆ ನಡೆಸಿದರು. ಅದಕ್ಕೆ ನನ್ನ ಸಂಪೂರ್ಣ ಸಹಕಾರದೊಂದಿಗೆ ಸರ್ಕಾರದಿಂದಲೂ ಅನುದಾನ ತರುವ ಕೆಲಸ ಮಾಡುತ್ತೇನೆ ಎಂದು ನೂತನ ಸಂಸದ ಶ್ರೇಯಸ್ ಪಟೇಲ್ ಭರವಸೆ ನೀಡಿದರು.