ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಗುರುಮಠಕಲ್ ಮತಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಕುಡಿವ ನೀರಿಗಾಗಿ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ಸಮೀಪದ ಗುರುಮಠಕಲ್ ಮತಕ್ಷೇತ್ರದ ಯರಗೋಳ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಜಿಪಂ, 2021-22ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದ ಅಡಿಯಲ್ಲಿ ₹95 ಲಕ್ಷ ಅನುದಾನದ ನೂತನ 7 ಶಾಲಾ ಕೋಣೆಗಳು, ಶಿಕ್ಷಣ ಇಲಾಖೆ ಯೋಜನೆ ಅಡಿಯಲ್ಲಿ ₹1ಕೋಣೆ, 45ಲಕ್ಷಗಳ ಅನುದಾನದ ನೂತನ ಪಶು ಆಸ್ಪತ್ರೆಯ ಕಟ್ಟಡದ ಉದ್ಘಾಟನೆ, ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ₹10 ಲಕ್ಷ ರಸ್ತೆಗೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿ, ಗುರುಮಠಕಲ್ ಜನತೆ ನನಗೆ ಹೆಚ್ಚಿನ ಮತ ನೀಡುವ ಮೂಲಕ ಆಶೀರ್ವಾದ ಮಾಡಿದ್ದು, ಅಭಿವೃದ್ಧಿ ಮಾಡುವ ಮೂಲಕ ಋಣ ತೀರಿಸುವೆ ಎಂದು ಎಂದರು.
ಗುರುಮಠಕಲ್ ಮತ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ಈ ಬಾರಿ ಎಸ್ಎಸ್ಎಲ್‌ಸಿ ಫಲಿತಾಂಶ ಕಡಿಮೆಯಾಗಿದ್ದು ನೋವಿನ ಸಂಗತಿ. ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ತರಕಾರಿ ಕತ್ತರಿಸುವ ಕೆಲಸದ ಬದಲು ಬೋಧನೆಗೆ ಹಚ್ಚಿದಾಗ ಫಲಿತಾಂಶ ಸುಧಾರಣೆ ಆಗುತ್ತದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ, ಶುದ್ಧ ಕುಡಿವ ನೀರಿನ ಘಟಕ, ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯ, ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಬೇಕಾದ ಸಾಮಗ್ರಿಗಳು ಶೀಘ್ರದಲ್ಲಿ ಒದಗಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮದಲ್ಲಿ ಶೀಘ್ರದಲ್ಲಿಯೇ ವೈದ್ಯರಿಗೆ ವಸತಿ ಗೃಹಗಳನ್ನು ನಿರ್ಮಿಸಿ, ದಿನದ 24 ಗಂಟೆಗಳ ಕಾಲ ಗ್ರಾಮಸ್ಥರ ಆರೋಗ್ಯ ಸೇವೆ ಸಲ್ಲಿಸುವಂತೆ ತಿಳಿಸಲಾಗುವುದು ಎಂದ ಅವರು, ವಿದ್ಯುತ್ ತಗುಲಿ ಮೃತಪಟ್ಟ ಅಡಮಡಿ ತಾಂಡದ ಬಾಲಕ ಕಾಶಿನಾಥ್ ಶಂಕರ್ ಅವರ ಪರಿವಾರಕ್ಕೆ 5 ಲಕ್ಷ ರು. ಚೆಕ್ ವಿತರಿಸಿದರು.ಈ ವೇಳೆ ಗ್ರಾಮದ ರಾಮಲಿಂಗೇಶ್ವರ ಬೆಟ್ಟಕ್ಕೆ ರಸ್ತೆ ನಿರ್ಮಿಸುವಂತೆ ಶ್ರೀರಾಮಲಿಂಗೇಶ್ವರ ಸೇವಾ ಸಮಿತಿಯ ಸದಸ್ಯರು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಆದಷ್ಟು ಶೀಘ್ರದಲ್ಲಿ ಅಧಿಕಾರಿಗಳನ್ನು ಕಳುಹಿಸಿ, ವರದಿ ಪಡೆದುಕೊಳ್ಳಲಾಗುವುದು ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ರಾಮಣ್ಣ ಅಲ್ಲಿಪುರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣಕುಮಾರ, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ರೇಣುಕಾ ಎಂ. ಮಾನೆಗಾರ, ಚನ್ನಬಸಪ್ಪ ಜೋಗಿ, ಅಲ್ಪಸಂಖ್ಯಾತ ಇಲಾಖೆಯ ಪ್ರವೀಣ್ ಕುಮಾರ, ಲೋಕೋಪಯೋಗಿ ಇಲಾಖೆಯ ಕಿರಣಕುಮಾರ, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ರಾಜು ದೇಶಮುಖ. ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಪೂಜಾರಿ, ನಿರ್ಮಿತಿ ಕೇಂದ್ರದ ಕಿರಣ ಕುಮಾರ್, ಜೆಸ್ಕಾಂನ ಇಂಜಿನಿಯರ್ ಸಂಜೀವ ಕುಮಾರ್, ಅರಣ್ಯ ಇಲಾಖೆಯ ಅಧಿಕಾರಿ ಲಕ್ಷ್ಮಣ್, ಕೆಬಿಜಿಎನ್ಎಲ್ ಅಧಿಕಾರಿ ಕಲ್ಯಾಣಕುಮಾರ್, ಆರೋಗ್ಯ ಅಧಿಕಾರಿ ಡಾ.ವಿಜಯಕುಮಾರ್, ಮುಖ್ಯ ಶಿಕ್ಷಕಿ ಶಾಂತಮ್ಮ, ಪ್ರಾಂಶುಪಾಲ ಬೀಸಲಪ್ಪ ಕಟ್ಟಿಮನಿ, ಕಾರ್ಯಕರ್ತರಾದ ಶಿವಣ್ಣ ಅರಿಕೇರಿ, ಶಿವಯೋಗಿ, ಶಂಕ್ರಪ್ಪ, ನಾಗರಾಜ ಮಹಂತಗೌಡರ ಇತರರಿದ್ದರು. ವಿದ್ಯುತ್ ತಗುಲಿ ಹಸು ಸಾವು: 50 ಸಾವಿರ ಪರಿಹಾರಯಾದಗಿರಿ: ಸಮೀಪದ ಲಿಂಗೇರಿ ಗ್ರಾಮದಲ್ಲಿ ವಿದ್ಯುತ್ ತಗುಲಿ ಮೃತಪಟ್ಟಿದ್ದ ಹಸುವಿನ ಮಾಲೀಕರಾದ ಲಿಂಗಪ್ಪ ಅವರ ಕುಟುಂಬಕ್ಕೆಶಾಸಕ ಶರಣಗೌಡ ಕಂದಕೂರು ತಮ್ಮ ಜನಸಂಪರ್ಕ ಕಚೇರಿಯಲ್ಲಿ 50 ಸಾವಿರ ರು. ಚೆಕ್ ವಿತರಿಸಿದರು. ಅಧಿಕಾರಿಗಳಾದ ಜೆಸ್ಕಾಂ ಶಾಖಾಧಿಕಾರಿ ಮೋಸಿನ್, ಮುಖಂಡರಾದ ಬಂದಪ್ಪಗೌಡ ಲಿಂಗೇರಿ, ಸೋಮಣಗೌಡ ಬೆಳಿಗೇರಾ, ಆಶಪ್ಪ ಬೆಳಗೇರಾ, ಶಾಂತು ಸಾಹುಕಾರ ಕೋಟಗೇರಾ, ಬಾಲರೆಡ್ಡಿ ಕುಂಟಿಮರಿ ಇತರರಿದ್ದರು.