ಸಾರಾಂಶ
ಗೋಕರ್ಣ: ಉಳಿದೆಲ್ಲ ಕ್ಷೇತ್ರಕ್ಕಿಂತ ಹೆಚ್ಚು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಅವರು ಗಂಗೆಕೊಳ್ಳ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಗ್ರಾಮೀಣ ಭಾಗದ ಈ ಶಾಲೆಯು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದೆ. ಮೊದಲು ಶಾಲೆಗೆ ತಮ್ಮ ಮನೆಯಲ್ಲಿಯೇ ಸ್ಥಳಾವಕಾಶ ನೀಡಿ,ನಂತರ ಶಾಲಾ ಕಟ್ಟಡಕ್ಕೆ ತಮ್ಮ ಸ್ವಂತ ಭೂಮಿಯನ್ನು ದಾನವಾಗಿ ನೀಡಿದ ತಿಮ್ಮಪ್ಪ ನಾಯ್ಕರು ಪ್ರಾತಃ ಸ್ಮರಣೀಯರು ಎಂದರು.
ಶಾಲಾ-ಕಾಲೇಜುಗಳ ಅಭಿವೃದ್ಧಿಯು ನಮಗೆ ಪ್ರಥಮ ಪ್ರಾಶಸ್ತ್ಯವಾಗಿದ್ದು, ಗಂಗೆಕೊಳ್ಳ ಶಾಲೆಗೆ ಅಗತ್ಯವಿರುವ ಕೊಠಡಿ ಹಾಗೂ ಇತರ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಿ ಕೊಡುವ ಭರವಸೆ ನೀಡಿದರು. ಅಲ್ಲದೇ ತಮ್ಮ ಬಾಲ್ಯದಲ್ಲಿ ಶಿಕ್ಷಣಕ್ಕಾಗಿ ಕಷ್ಟಪಟ್ಟಿರುವುದನ್ನು ವಿವರಿಸಿ, ಇಂದು ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸೌಲಭ್ಯವಿದ್ದು, ಪ್ರಯೋಜನೆ ಪಡೆದುಕೊಳ್ಳುವಂತೆ ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಗಂಗೆಕೊಳ್ಳ ಶಾಲೆಯು ಪಟ್ಟಣದಿಂದ ಬಹಳ ದೂರದಲ್ಲಿದೆ. ಆದರೆ ಇಲ್ಲಿನ ಗ್ರಾಮಸ್ಥರು ಶಿಕ್ಷಣಕ್ಕೆ ನೀಡುತ್ತಿರುವ ಪ್ರಾಧಾನ್ಯತೆ ಎಲ್ಲರಿಗೂ ಮಾದರಿಯಾಗುವಂತಿದೆ. ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ತುಂಬಾ ಸಂತೋಷದ ಸಂಗತಿ ಎಂದರು.
ತಿಮ್ಮಪ್ಪ ನಾಯ್ಕರು ತಮ್ಮ ಮನೆ ಮಾಳಿಗೆಯ ಮೇಲೆ ಸ್ಥಳಾವಕಾಶ ನೀಡುವ ಮೂಲಕ ಪ್ರಾರಂಭಿಸಿದ ಈ ಶಾಲೆಯಲ್ಲಿ ಇಂದು ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಸ್‌ಡಿಎಂಸಿ ಹಾಗೂ ಶಿಕ್ಷಕರ ಸಂಪೂರ್ಣ ಪರಿಶ್ರಮವು ಶಾಲೆಯನ್ನು ಅತ್ಯುತ್ತಮ ಶಾಲೆಯನ್ನಾಗಿ ಮಾಡಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಾಡುಮಾಸ್ಕೇರಿ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ, ಉಪಾಧ್ಯಕ್ಷೆ ವಿಜಯಾ ನಾಯ್ಕ್, ಸದಸ್ಯರಾದ ಚಂದ್ರಶೇಖರ ನಾಯ್ಕ್, ದಯಾ ಮೆಹತಾ, ನಾಗರಾಜ ತಾಂಡೇಲ್, ರೋಹಿಣಿ ನಾಯ್ಕ್, ಡಿಡಿಪಿಐ (ಅಭಿವೃದ್ಧಿ) ಎಂ.ಜಿ. ನಾಯಕ, ಬಿಇಒ ರಾಜೇಂದ್ರ ಎಲ್. ಭಟ್, ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿನ್ ನಾಯ್ಕ್, ಮುಖ್ಯಾಧ್ಯಾಪಕ ಉದಯ ಕೆ. ನಾಯಕ ಉಪಸ್ಥಿತರಿದ್ದರು. ಚಂಡೆ ನಾದ, ಪೂರ್ಣಕುಂಭ ಸ್ವಾಗತದೊಂದಿಗೆ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ದಾನಿಗಳ ನೆರವಿನಿಂದ ನೂತನ ಕೊಠಡಿ, ನಾಮಫಕ ಅನಾವರಣ, ಸಿಸಿ ಕ್ಯಾಮೆರಾ, ಸ್ಮಾರ್ಟ್ ಟಿವಿಗಳನ್ನು ಸಚಿವರು ಉದ್ಘಾಟಿಸಿದರು.