ಎಸ್‌ಐಆರ್ ಎಂಬ ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು.
ಜ್ಯಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಒಕ್ಕೂಟ ಹೋರಾಟ । ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ: ಶ್ರೀರಂಗಾಚಾರಿ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಎಸ್ಐಆರ್ ವಿರೋಧಿಸಿ ಮೊದಲ ಸುತ್ತಿನ ಪ್ರತಿರೋಧದ ಅಂಗವಾಗಿ ಜ್ಯಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಒಕ್ಕೂಟ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಎದ್ದೇಳು ಕರ್ನಾಟಕ ಸಂಘಟನೆಗಳಿಂದ ಶನಿವಾರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಖಜಾಂಚಿ ಶ್ರೀರಂಗಾಚಾರಿ ಮಾತನಾಡಿ, ಎಸ್‌ಐಆರ್ ಎಂಬ ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತ ಮತದಾರರ ಪಟ್ಟಿಯ ಪರಿಷ್ಕರಣಾ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು. ಅದು ಸಾಧ್ಯವಾಗದಿದ್ದರೆ ಜನಸ್ನೇಹಿ ರೀತಿಯಲ್ಲಿ ಎಸ್‌ಐಆರ್ ಜಾರಿಗೆ ತರಬೇಕು ಹಾಗೂ ಮತದಾರರು ತಮ್ಮ ಗುರುತು ಮತ್ತು ಪೌರತ್ವವನ್ನು ಸಾಬೀತುಪಡಿಸಲು ಸೂಕ್ತ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿದರು.ದೇಶದ ಪ್ರಜಾತಂತ್ರದ ಅಡಿಪಾಯವನ್ನು ಬುಡಬೇಲು ಮಾಡುತ್ತಿರುವ ಹಾಗೂ ಸಂವಿಧಾನದ ನಿರ್ದೇಶನಕ್ಕೆ ವಿರುದ್ಧ ದಿಕ್ಕಿನಲ್ಲಿ ದೇಶವನ್ನು ಎಳೆದೊಯ್ಯಲು ಪ್ರಯತ್ನಿಸುತ್ತಿರುವ ಎಸ್‌ಐಆರ್‌ನ ಮೂರನೇ ಸುತ್ತಿನ ದಾಳಿ ಪ್ರಾರಂಭವಾಗುತ್ತಿದೆ. ಕರ್ನಾಟಕ ಅಪಾಯದ ಹೊಸ್ತಿಲಿನಲ್ಲಿ ನಿಂತಿದೆ. ಆದರೆ ಕರ್ನಾಟಕ ಈ ದುಷ್ಕ ಯೋಜನೆಯನ್ನು ತಿರಸ್ಕರಿಸಲು ತೀರ್ಮಾನಿಸಿದೆ. ತಾತ್ವಿಕವಾಗಿ ವಿರೋಧಿಸಿದರೆ ಸಾಲದು ಅದಕ್ಕಾಗಿ ಅಗತ್ಯವಿರುವ ಪರಿಣಾಮಕಾರಿ ಕ್ರಮಗಳಿಗೆ ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದರು.
ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಸಂವಿಧಾನದ ವಿರುದ್ಧವಾಗಿದೆ. ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮ ರೂಪಿಸಿ ಈ ಪ್ರಕ್ರಿಯೆ ನಡೆಸುತ್ತಿದೆ. 2002ರ ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರಿಗೆ ಭಾರತೀಯ ನಾಗರಿಕರೆಂದು ಸಾಬೀತುಪಡಿಸಲು ದಾಖಲೆಗಳನ್ನು ಕೇಳಲಾಗುತ್ತಿದೆ. ಅಲ್ಲದೆ, ಹೆಸರಿನಲ್ಲಿನ ಸಣ್ಣಪುಟ್ಟ ತಪ್ಪುಗಳನ್ನು ಕಾರಣವನ್ನಾಗಿ ಮಾಡಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಬಿಹಾರ ಹಾಗೂ ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ಲಕ್ಷಾಂತರ ಮತದಾರರನ್ನುಪಟ್ಟಿಯಿಂದ ಹೊರಗಿಡಲಾಗಿದೆ. ನುಸುಳುಕೋರರು ಎಂಬ ಆರೋಪಗಳನ್ನು ಮುಂದಿಟ್ಟು ಮತದಾನದ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ, ನ್ಯಾಯಾಲಯ ಅಪರಾಧದ ಪರ ವಕಾಲತ್ತು ವಹಿಸಿದಾಗ ರಾಜ್ಯವನ್ನು ರಾಜ್ಯದ ಜನರನ್ನು ನಮ್ಮ ದೇಶದ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾದರೆ ನಾವು ಅಂತಃಸಾಕ್ಷಿಯ, ಅನನ್ನ ದಿಟ್ಟ ಪ್ರತಿರೋಧಕ್ಕೆ ಸಿದ್ಧವಾಗಬೇಕಿದೆ. ಮಾಮೂಲಿ ಕ್ರಮಗಳು ಕೆಲಸಕ್ಕೆ ಬರುವುದಿಲ್ಲ.ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಎಸ್‌ಐಆರ್ ಬಗ್ಗೆ ಎಚ್ಚರಿಕೆ ವಹಿಸಿ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಂಡಿದ್ದವು. ಆದರೆ ಪಶ್ಚಿಮ ಬಂಗಾಳದಲ್ಲಿ ಅಂತಹ ಕ್ರಮ ಕೈಗೊಳ್ಳದ ಕಾರಣ ಲಕ್ಷಾಂತರ ಮತದಾರರು ಮತದಾನದಿಂದ ವಂಚಿತರಾದರು ಎಂದು ತಿಳಿಸಿದರು.
ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಡಾ.ಎನ್.ಬಾಸ್ಕರ್‌ರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಜಿಲ್ಲಾ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ.ಮಹಮದ್ ನೂರುಲ್ಲಾ, ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ಶಾಮೀರ್, ದಸಂಸ ಮುಖಂಡ ಎನ್.ವೆಂಕಟೇಶ್, ದಸಂಸ ತಾಲೂಕು ಸಂಚಾಲಕರಾದ ಎನ್.ಪರಮೇಶ್, ಪಿ.ನರಸಿಂಹಮೂರ್ತಿ. ರಾಜು, ಕೆವಿಎಸ್ ಕಿರಣ್ ನಾಯಕ್, ಜೀವಿಕ ಸಂಘಟನೆ ತಾಲೂಕು ಸಂಚಾಲಕ ಶ್ರೀನಿವಾಸ್, ಎಸ್‌ಡಿಪಿಐನ ಮಹಮದ್ ಮುಸ್ತಪಾ, ಅಫ್ ಝಲ್, ಮತ್ತಿತರರು ಇದ್ದರು.
ಸಿಕೆಬಿ -2 ಎಸ್ಐಆರ್ ವಿರೋಧಿಸಿ ಮೊದಲ ಸುತ್ತಿನ ಪ್ರತಿರೋಧದ ಅಂಗವಾಗಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಯಿತು.