ಬಿಎಲ್‌ಡಿಇನಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ

| Published : Jan 20 2024, 02:07 AM IST

ಬಿಎಲ್‌ಡಿಇನಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಲ್‌ಡಿಇನಲ್ಲಿ ಕ್ಯಾನ್ಸರ್ ಆಸ್ಪತ್ರೆ ಶೀಘ್ರ ಪ್ರಾರಂಭ ಮಾಡಲಾಗುತ್ತದೆ ಎಂದು ಡಾ.ಆರ್.ಎಸ್. ಮುಧೋಳ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಉಪ ಕುಲಪತಿ ಡಾ.ಆರ್.ಎಸ್.ಮುಧೋಳ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದಿಂದ ಬೆಳಗಾವಿ, ಬೆಂಗಳೂರು, ಹೈದ್ರಾಬಾದ್, ಸೋಲ್ಹಾಪುರ, ಪುಣೆಯಂತ ಆಸ್ಪತ್ರೆಯಲ್ಲಿ ಹೋಗಬೇಕಿತ್ತು. ಆದರೆ, ಸಂಸ್ಥೆಯ ಅಧ್ಯಕ್ಷ ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಡಾ.ಎಂ.ಬಿ.ಪಾಟೀಲ ಆಶಯದಂತೆ ಜಿಲ್ಲೆಯ ಜನರು ಬೇರೆ ಕಡೆಹೋಗಬಾರದು. ಅವರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಮಾಡಲು ಎಎಲ್‌ಡಿಇ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿದ್ಧವಾಗಿದೆ ಎಂದರು.

ಆಸ್ಪತ್ರೆ ದಾಖಲಾದ ಮೊದಲ 5 ಜನರಿಗೆ ಉಚಿತ ಕಿಡ್ನಿ ಕಸಿ ಯೋಜನೆಯಂತೆ ಈಗ ಮೊದಲ ರೋಗಿಗೆ ಉಚಿತವಾಗಿ ಮೂತ್ರಪಿಂಡ ಕಸಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಮಾಡಲಾಗುವ ಶಸ್ತ್ರಚಿಕಿತ್ಸೆ ವೆಚ್ಚದಲ್ಲಿ ರಾಜ್ಯದ ಉಳಿದ ಆಸ್ಪತ್ರೆಗಳಿಗೆ ಹೋಲಿಸಿದರೆ 2-3 ಪಟ್ಟು ಕಡಿಮೆಯಿದೆ ಎಂದರು.

ಬಿಹಾರ ಮೂಲದ 17 ವರ್ಷದ ಯುವಕನಿಗೆ ಮೂತ್ರಪಿಂಡ ಕಸಿ ಮಾಡಿದ್ದೇವೆ. ಈ ಯುವಕನಿಗೆ ಆತನ ತಾಯಿ ಕಿಡ್ನಿ ದಾನ ಮಾಡಿದ್ದಾರೆ. ರೋಗಿಯು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿದೆ ಎಂದರು.

ನಮ್ಮಲ್ಲಿ ನೋಂದಾಯಿಸಲು ಮತ್ತು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಲು ಮೊ.6366786004ಗೆ ಸಂಪರ್ಕಿಸಬೇಕು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಮಾರ್ಗದರ್ಶನದಲ್ಲಿ ಶೀಘ್ರದಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭವಾಗಲಿದೆ ಎಂದರು.

ಯಶಸ್ವಿಯಾಗಿ ನಡೆಸಲಾದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗದ ಮುಖ್ಯಸ್ಥ ಡಾ.ಎಸ್.ಬಿ. ಪಾಟೀಲ, ಡಾ. ದಿಲೀಪ ಜವಳಿ, ಡಾ.ವಿ.ಎಸ್.ಕುಂದರಗಿ, ಡಾ.ಸಂತೋಷ ಪಾಟೀಲ, ಡಾ.ಸಂದೀಪ ಪಾಟೀಲ, ಡಾ.ಭುವನೇಶ ಆರಾಧ್ಯ ಮತ್ತು ವಿಭಾಗದ ಎಲ್ಲ ಸ್ನಾತಕೋತ್ತರ ಪದವೀಧರರ ವಿದ್ಯಾರ್ಥಿಗಳು ತಂಡವು ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ ಮಾಡಿದ್ದಾರೆ ಎಂದು ತಿಳಿಸಿದರು.

ಡಾ.ಎಸ್.ಬಿ.ಪಾಟೀಲ ಮಾತನಾಡಿ, ರೋಗಿ ಈಗ ಗುಣಮುಖನಾಗಿದ್ದಾನೆ ಎಂದರು. ಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ, ಸಮಕುಲಪತಿ ಡಾ.ಅರುಣ ಇನಾಮದಾರ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ ಮುಂತಾದವರು ಇದ್ದರು.