ಸರ್ಕಾರ ಮತ್ಸ್ಯ ಸಂಜೀವಿನಿ ಯೋಜನೆ ಸ್ವ ಸಹಾಯ ಗುಂಪಿನ ಮಹಿಳೆಯರನ್ನು ಮೀನು ಸಾಕಾಣಿಕೆಯಲ್ಲಿ ಉದ್ಯಮಶೀಲರನ್ನಾಗಿಸುವ ಗುರಿ ಜೊತೆಗೆ ಸ್ತ್ರೀ ಸಬಲೀಕರಣದ ಮುಖ್ಯ ಉದ್ದೇಶವಾಗಿದೆ. ಮೀನು ಸಾಕಾಣಿಕೆಯಿಂದ ಹಣ ಸಂಪಾದನೆ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮೀನು ಸಾಕಾಣಿಕೆಯಿಂದ ಹಣ ಸಂಪಾದನೆ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಸಮೀಪದ ಅಣ್ಣೂರು ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಭೂಮಿಕಾ ಸಂಜೀವಿನಿ ಗ್ರಾಪಂ ಒಕ್ಕೂಟ ಸಹಯೋಗದಲ್ಲಿ ನಡೆದ ಮತ್ಸ್ಯ ಸಂಜೀವಿನಿ- ಒಳನಾಡು ಮೀನುಗಾರಿಕಾ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿ, ಮೀನುಗಾರಿಕೆ ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಮೀನಿಗೆ ಬಹಳ ಬೇಡಿಕೆ ಇದ್ದು, ಮೀನು ತಿನ್ನುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಜೊತೆಗೆ ಮೀನು ಸಾಕಾಣಿಕೆಯಿಂದ ಲಾಭವೂ ದೊರಕಲಿದೆ ಎಂದರು.
ಸರ್ಕಾರ ಮತ್ಸ್ಯ ಸಂಜೀವಿನಿ ಯೋಜನೆ ಸ್ವ ಸಹಾಯ ಗುಂಪಿನ ಮಹಿಳೆಯರನ್ನು ಮೀನು ಸಾಕಾಣಿಕೆಯಲ್ಲಿ ಉದ್ಯಮಶೀಲರನ್ನಾಗಿಸುವ ಗುರಿ ಜೊತೆಗೆ ಸ್ತ್ರೀ ಸಬಲೀಕರಣದ ಮುಖ್ಯ ಉದ್ದೇಶವಾಗಿದೆ ಎಂದರು.ತಾಪಂ ಇಒ ರಾಮಲಿಂಗಯ್ಯ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸಣ್ಣ ಕೆರೆ ಕಟ್ಟೆ ಕೊಳಗಳಲ್ಲಿ ಮೀನು ಮರಿ ಸಾಕಾಣಿಕೆ ಮಾಡಲು ಮತ್ಸ್ಯ ಸಂಜೀವಿನಿ ಯೋಜನೆ ಅಡಿ ಸ್ವ-ಸಹಾಯ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಈ ಸಂಬಂಧ ತಾಂತ್ರಿಕ ತರಬೇತಿ ಕೂಡ ಮಹಿಳೆಯರಿಗೆ ನೀಡಲಾಗಿದೆ. ಮದ್ದೂರು ತಾಲೂಕಿನಲ್ಲಿ ಯೋಜನೆಯಡಿ 5 ಸಣ್ಣ ಕೆರೆ ಕಟ್ಟೆಗಳಲ್ಲಿ ಮೀನು ಸಾಕಾಣಿಕೆ ಮಾಡಲು ಆದ್ಯತೆ ನೀಡಲಾಗಿದೆ ಎಂದರು.
ಇದೇ ವೇಳೆ ಪುಟ್ಡಕಟ್ಟೆಗೆ 5 ಸಾವಿರ ಮೀನು ಮರಿಗಳನ್ನು ಶಾಸಕರು ನೀರಿಗೆ ಬಿಟ್ಟರು. ಮೀನುಗಾರಿಕಾ ಇಲಾಖೆಯಿಂದ ಇಬ್ಬರು ಫಲಾನುಭವಿಗಳಿಗೆ ತೆಪ್ಪ, ಅರಿಗೋಲು, ಬಲೆ, ರಕ್ಷಣಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಯಿತು.ಈ ವೇಳೆ ಜಿಪಂ ಮಾಜಿ ಸದಸ್ಯ ಅಣ್ಣೂರು ರಾಜೀವ, ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಚಂದ್ರಶೇಖರ್, ಪಿಣ್ಣಸತೀಶ್, ಮಂಜುಕುಮಾರ್, ಗ್ರಾಪಂ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾರತಿ ಶ್ರೀ ಹರ್ಷ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ಪಿಡಿಒ ಹರೀಶ್, ಎನ್‌ಆರ್‌ಎಲ್‌ಎಂ ಸಿಬ್ಬಂದಿ ರವೀಂದ್ರಗೌಡ, ಅಂಬರಹಳ್ಳಿ ಸ್ವಾಮಿ, ಪ್ರದೀಪ್, ಗುರುಲಿಂಗಸ್ವಾಮಿ, ಸುಮಾ ಪಾಲ್ಗೊಂಡಿದ್ದರು.